ಜನಪರ ಆಡಳಿತ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲ :ಪ್ರಿಯಾಂಕ್ ಖರ್ಗೆ
ಬೆಂಗಳೂರು, 23 ಮೇ (ಹಿ.ಸ.) : ಆ್ಯಂಕರ್ : ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯಿಂದ ದೇಶದ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರ ಕೆಲ ದಿನಗಳ ಹಿಂದೆ ದೇಶದಲ್ಲಿ ಸಾಕಷ್ಟು ಕಚ್ಚಾ ತೈಲ ಸಂ
ಜನಪರ ಆಡಳಿತ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲ :ಪ್ರಿಯಾಂಕ್ ಖರ್ಗೆ


ಬೆಂಗಳೂರು, 23 ಮೇ (ಹಿ.ಸ.) :

ಆ್ಯಂಕರ್ : ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯಿಂದ ದೇಶದ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರ ಕೆಲ ದಿನಗಳ ಹಿಂದೆ ದೇಶದಲ್ಲಿ ಸಾಕಷ್ಟು ಕಚ್ಚಾ ತೈಲ ಸಂಗ್ರಹವಿದೆ ಎಂದು ಹೇಳಿ, ಇದೀಗ ಇಂಧನ ಬಳಕೆ ಕಡಿಮೆ ಮಾಡುವಂತೆ ಜನರಿಗೆ ಸಲಹೆ ನೀಡುತ್ತಿರುವುದು ವಿಪರ್ಯಾಸವಾಗಿದೆ ಎಂದು ಟೀಕಿಸಿದ ಅವರು, “ಜನತೆಗೆ ಈಗಾಗಲೇ ಬೆಲೆ ಏರಿಕೆಯ ಗಾಯ ಮಾಡಿರುವ ಮೋದಿ ಸರ್ಕಾರ, ಆ ಗಾಯದ ಮೇಲೆಯೇ ಮತ್ತೊಮ್ಮೆ ಬೆಲೆ ಏರಿಕೆಯ ಬರೆಯನ್ನು ಎಳೆಯುತ್ತಿದೆ” ಎಂದು ಆರೋಪಿಸಿದರು.

ಕಳೆದ 13 ವರ್ಷಗಳಲ್ಲಿ ಭಾರತ ಹಾಗೂ ಭಾರತೀಯರು ಇಂತಹ ಸಂಕಷ್ಟದ ಪರಿಸ್ಥಿತಿಯನ್ನು ಕಂಡಿರಲಿಲ್ಲ ಎಂದು ಹೇಳಿದ ಅವರು, ಈಗಾಗಲೇ ಆರ್ಥಿಕ ಒತ್ತಡದಲ್ಲಿರುವ ಜನರ ಮೇಲೆ ಮತ್ತಷ್ಟು ಹೊರೆ ಹಾಕಲಾಗುತ್ತಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೇವಲ ಘೋಷಣೆಗಳ ಆಡಳಿತ ನಡೆಸಿದ್ದು, “ಅಚ್ಚೇ ದಿನ್”, “ವಿಶ್ವಗುರು”, “ಆತ್ಮನಿರ್ಭರ” ಮೊದಲಾದ ಘೋಷಣೆಗಳನ್ನು ವಾಸ್ತವ ರೂಪಕ್ಕೆ ತರಲು ವಿಫಲವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ಚುನಾವಣೆ ಸಮಯದಲ್ಲಿ “ವಾರ್ ರುಕ್ವಾ ದಿಯಾ” ಎಂಬ ಜಾಹೀರಾತು ನೀಡಿದ್ದ ಮೋದಿ ಸರ್ಕಾರಕ್ಕೆ ಈಗ ಮಧ್ಯಪ್ರಾಚ್ಯದ ಬಿಕ್ಕಟ್ಟಿನ ನಡುವೆ ಭಾರತದ ಹಿತಾಸಕ್ತಿ ಕಾಪಾಡಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು.

“ಮೋದಿ ವಿಶ್ವಗುರು ಆಗಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಅವರದೇ ಸಂಘ ಪರಿವಾರದ ನಾಯಕ ಮೋಹನ್ ಭಾಗವತ್ ಹೇಳಿದ್ದಾರೆ” ಎಂದು ಅವರು ಹೇಳಿದರು.

“ವಿಶ್ವಗುರು” ಆಗಲು ಸಾಧ್ಯವಾಗದ ಪ್ರಧಾನಿ ಇದೀಗ ದೇಶದ ಜನರಿಗೆ ಆತ್ಮನಿರ್ಭರ ಬದುಕು ನಡೆಸುವಂತೆ ಸಲಹೆ ನೀಡುತ್ತಿದ್ದಾರೆ. ದೇಶದಲ್ಲಿ ಸಂಕಷ್ಟ ಇರುವುದು ಇಂಧನ ಕೊರತೆಯಿಂದಲ್ಲ, ಸಮರ್ಥ ನಾಯಕತ್ವದ ಕೊರತೆಯಿಂದ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

ಇಂಧನ ಬೆಲೆ ಏರಿಕೆ ವಿಚಾರದಲ್ಲಿ ರಾಜ್ಯ ಸರ್ಕಾರದ ಮೇಲೆ ಟೀಕೆ ಮಾಡುವ ಬಿಜೆಪಿ ನಾಯಕರ ವಿರುದ್ಧವೂ ಅವರು ಕಿಡಿಕಾರಿದರು. “ಕರ್ನಾಟಕ ಸರ್ಕಾರ ಸೆಸ್ ಕಡಿಮೆ ಮಾಡಲಿ ಎಂದು ಹೇಳುವ ಬಿಜೆಪಿ ನಾಯಕರು, ಬಿಜೆಪಿ ಆಡಳಿತದ ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಏಕೆ ಸೆಸ್ ಕಡಿಮೆ ಮಾಡಲಾಗಿಲ್ಲ ಎಂಬುದಕ್ಕೆ ಉತ್ತರಿಸಲಿ” ಎಂದು ಸವಾಲು ಹಾಕಿದರು.

ತೆರಿಗೆ ಪಾವತಿ, ಐಟಿ-ಬಿಟಿ ರಫ್ತು, ಜಿಎಸ್ಟಿ ಸಂಗ್ರಹ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕರ್ನಾಟಕ ದೇಶಕ್ಕೆ ಅತಿದೊಡ್ಡ ಕೊಡುಗೆ ನೀಡುತ್ತಿರುವ ರಾಜ್ಯವಾಗಿದೆ ಎಂದು ಹೇಳಿದ ಅವರು, “ದೇಶ ಕಟ್ಟುವಲ್ಲಿ ಕನ್ನಡಿಗರ ಕೊಡುಗೆ ಅಪಾರವಾಗಿದೆ. ಇನ್ನೂ ಸಹ ಕೇಂದ್ರ ಸರ್ಕಾರದ ವೈಫಲ್ಯದ ಹೊರೆ ಕನ್ನಡಿಗರೇ ಹೊರುವ ಪರಿಸ್ಥಿತಿ ಬರಬಾರದು” ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ನಾಯಕರು ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande