ಮಳೆ ಸಂತ್ರಸ್ತರಿಗಾಗಿ ಮತ್ತೆ ಕಾಳಜಿ ಕೇಂದ್ರ ಆರಂಭ ; ಶಾಶ್ವತ ಪರಿಹಾರದ ಭರವಸೆ ನೀಡಿದ ಜಿಲ್ಲಾಡಳಿತ
ಅಧಿಕಾ ರಿ ಗಳು
ಫೋಟೋ


ಗದಗ, 23 ಮೇ (ಹಿ.ಸ.) :

ಆ್ಯಂಕರ್ : ಗದಗ ನಗರದ ಗಂಗಿಮಡಿ ಪ್ರದೇಶದಲ್ಲಿ ಮಳೆ ಹಾಗೂ ಬಿರುಗಾಳಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತ ಕುಟುಂಬಗಳಿಗಾಗಿ ಜಿಲ್ಲಾಡಳಿತ ಮತ್ತೊಮ್ಮೆ ಕಾಳಜಿ ಕೇಂದ್ರವನ್ನು ಆರಂಭಿಸಿದೆ. ನಿನ್ನೆ ಮಧ್ಯಾಹ್ನ ಕಾಳಜಿ ಕೇಂದ್ರವನ್ನು ಬಂದ್ ಮಾಡಲಾಗಿತ್ತು. ಹೀಗಾಗಿ ಇಡೀ ರಾತ್ರಿ ಸಂತ್ರಸ್ತರು ಊಟ ವಸತಿ ಇಲ್ಲದೆ ಪರದಾಟ ನಡೆಸಿದರು. ಸಂತ್ರಸ್ತರ ಪರಿಸ್ಥಿತಿಯನ್ನು ಗಮನಿಸಿದ ಅಧಿಕಾರಿಗಳು ಮತ್ತೆ ಕಾಳಜಿ ಕೇಂದ್ರವನ್ನು ತೆರೆಯುವ ಮೂಲಕ ತಾತ್ಕಾಲಿಕ ಆಶ್ರಯ, ಊಟ ಹಾಗೂ ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಕಲ್ಪಿಸಿದ್ದಾರೆ.

ಇತ್ತಿಚೆಗೆ ಭಾರಿ ಗಾಳಿ ಹಾಗೂ ಮಳೆಯಿಂದ ಗಂಗಿಮಡಿ ಪ್ರದೇಶದ 80ಕ್ಕೂ ಹೆಚ್ಚು ಮನೆಗಳ ಶೆಡ್ಗಳು ಹಾರಿ ಹೋಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಸರ್ಕಾರಿ ಜಾಗದಲ್ಲಿ 100ಕ್ಕೂ ಹೆಚ್ಚು ಕುಟುಂಬಗಳು ತಾತ್ಕಾಲಿಕ ಶೆಡ್ ಹಾಕಿಕೊಂಡು ಜೀವನ ಸಾಗಿಸುತ್ತಿದ್ದು, ಗಾಳಿ-ಮಳೆಯ ಆರ್ಭಟದಿಂದ ಅವರ ಆಶ್ರಯವೇ ಸಂಪೂರ್ಣ ಹಾನಿಗೊಳಗಾಗಿತ್ತು.

ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡ ಜಿಲ್ಲಾಡಳಿತ, ಬಡಾವಣೆಯ ಸರ್ಕಾರಿ ಶಾಲೆಯಲ್ಲಿ ಕಾಳಜಿ ಕೇಂದ್ರ ಆರಂಭಿಸಿ ಸಂತ್ರಸ್ತರಿಗೆ ಆಶ್ರಯ ನೀಡಿತ್ತು. ಆದರೆ ನಿನ್ನೆ ಕೆಲ ಸಂತ್ರಸ್ತರಿಗೆ ತಲಾ 5 ಸಾವಿರ ರೂಪಾಯಿ ಪರಿಹಾರ ವಿತರಿಸಿ ಮನೆಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದರು ಎನ್ನಲಾಗಿದೆ. ಆದರೆ ಅನೇಕ ಕುಟುಂಬಗಳು ಮನೆಗಳ ದುರಸ್ತಿ ಕಾರ್ಯ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಕಾಳಜಿ ಕೇಂದ್ರದ ಆವರಣದಲ್ಲಿಯೇ ರಾತ್ರಿ ಕಳೆದಿರುವುದು ಗಮನ ಸೆಳೆದಿತ್ತು. ಈ ಬೆಳವಣಿಗೆ ಬಳಿಕ ಬೆಳಗ್ಗೆಯೇ ಅಧಿಕಾರಿಗಳ ತಂಡ ಸ್ಥಳಕ್ಕೆ ದೌಡಾಯಿಸಿ ಸಂತ್ರಸ್ತರ ಅಹವಾಲು ಆಲಿಸಿತು.

ಉಪ ವಿಭಾಗಾಧಿಕಾರಿ ಎಂ. ಗಂಗಪ್ಪ ಹಾಗೂ ನಗರಸಭೆ ಆಯುಕ್ತ ರಾಜಾರಾಮ್ ಪವಾರ್ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ತಕ್ಷಣಕ್ಕೆ ಕಾಳಜಿ ಕೇಂದ್ರವನ್ನು ಮುಂದುವರಿಸಲು ಅವಕಾಶ ನೀಡುವ ಜೊತೆಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಕಲ್ಪಿಸಲಾಯಿತು.

ಸಂತ್ರಸ್ತರ ಆತಂಕವನ್ನು ತಣಿಸಲು ಮುಂದಾದ ಅಧಿಕಾರಿಗಳು, “ಯಾರನ್ನೂ ಕಾಳಜಿ ಕೇಂದ್ರದಿಂದ ಹೊರಹಾಕಿಲ್ಲ. ಸಾಧ್ಯವಾದಷ್ಟು ಬೇಗ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಭರವಸೆ ನೀಡಿದರು.

ಈ ಕುರಿತು ಮಾತನಾಡಿದ ಉಪ ವಿಭಾಗಾಧಿಕಾರಿ ಎಂ. ಗಂಗಪ್ಪ, “ಒಟ್ಟು 90 ಜನರಿಗೆ ಪರಿಹಾರ ನೀಡಲು ಗುರುತಿಸಲಾಗಿತ್ತು. ಕೆಲ ತಾಂತ್ರಿಕ ಕಾರಣಗಳಿಂದ 12 ಜನರಿಗೆ ಇನ್ನೂ ಪರಿಹಾರ ದೊರಕಿಲ್ಲ. ಅವರಿಗೆ ಕೂಡ ಶೀಘ್ರದಲ್ಲೇ ಪರಿಹಾರ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು. ಸಂತ್ರಸ್ತರಿಗೆ ಶಾಶ್ವತ ಸೂರು ಒದಗಿಸುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಲಾಗಿದೆ” ಎಂದು ಮಾಹಿತಿ ನೀಡಿದರು.

ಕಾಳಜಿ ಕೇಂದ್ರ ಮರು ಆರಂಭವಾಗಿರುವುದರಿಂದ ಸಂತ್ರಸ್ತ ಕುಟುಂಬಗಳಿಗೆ ತಾತ್ಕಾಲಿಕ ನೆಮ್ಮದಿ ಸಿಕ್ಕಿದರೂ, ಶಾಶ್ವತ ನಿವಾಸದ ಬೇಡಿಕೆ ಮಾತ್ರ ಇನ್ನೂ ಬಾಕಿಯೇ ಉಳಿದಿದೆ. ಜಿಲ್ಲಾಡಳಿತ ನೀಡಿರುವ ಭರವಸೆ ಎಷ್ಟು ಬೇಗ ಕಾರ್ಯರೂಪಕ್ಕೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande