
ಧಾರವಾಡ, 22 ಮೇ (ಹಿ.ಸ.) :
ಆ್ಯಂಕರ್ : ಧಾರವಾಡ ಜಿಲ್ಲಾಧಿಕಾರಿ ಸ್ನೇಹಲ್ ಆರ್. ನೇತೃತ್ವದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು, ರೈತ ಮುಖಂಡರು ಹಾಗೂ ರಸಗೊಬ್ಬರ ಮಾರಾಟಗಾರರೊಂದಿಗೆ ತುರ್ತು ವಿಡಿಯೋ ಸಂವಾದ ಸಭೆ ನಡೆಯಿತು. ಮುಂಗಾರು ಹಂಗಾಮು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಅಗತ್ಯ ಬೀಜ ಮತ್ತು ರಸಗೊಬ್ಬರಗಳ ಲಭ್ಯತೆ, ವಿತರಣೆ, ದರ ನಿಯಂತ್ರಣ ಹಾಗೂ ನಕಲಿ ಉತ್ಪನ್ನಗಳ ತಡೆ ಕುರಿತು ಜಿಲ್ಲಾಡಳಿತ ಮಹತ್ವದ ಸೂಚನೆಗಳನ್ನು ನೀಡಿದೆ.
ಧಾರವಾಡ ಜಿಲ್ಲೆಯಲ್ಲಿ ಜೂನ್ ಮೊದಲ ವಾರದಿಂದ ಬಿತ್ತನೆ ಚಟುವಟಿಕೆಗಳು ವೇಗ ಪಡೆಯಲಿರುವ ಹಿನ್ನೆಲೆಯಲ್ಲಿ ರೈತರಿಗೆ ಅಗತ್ಯ ಪ್ರಮಾಣದ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಸಿದ್ಧವಾಗಿದ್ದು, ಯಾವುದೇ ಆತಂಕ ಬೇಡ ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.
ಆದರೆ ಕೃತಕ ಅಭಾವ ಸೃಷ್ಟಿಸುವುದು, ಹೆಚ್ಚಿನ ದರಕ್ಕೆ ಮಾರಾಟ, ಲಿಂಕ್ ಗೊಬ್ಬರ ನೀಡುವುದು ಅಥವಾ ನಕಲಿ ಬೀಜ-ಗೊಬ್ಬರ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಫ್ರೂಟ್ ಐಡಿ ಇಲ್ಲದೆ ಯೂರಿಯಾ ಸಿಗದು
ರಾಜ್ಯ ಸರ್ಕಾರದ ನಿರ್ದೇಶನದಂತೆ ಫ್ರೂಟ್ ಐಡಿ ಹೊಂದಿರುವ ರೈತರಿಗೆ ಮಾತ್ರ ಯೂರಿಯಾ ಗೊಬ್ಬರ ವಿತರಿಸಲಾಗುವುದು ಎಂದು ಸಭೆಯಲ್ಲಿ ಸ್ಪಷ್ಟಪಡಿಸಲಾಯಿತು.
ಕೆ-ಕಿಸಾನ್ ತಂತ್ರಾಂಶ ಮತ್ತು ಪಿಒಎಸ್ ಯಂತ್ರದ ಮೂಲಕವೇ ಮಾರಾಟ ದಾಖಲಾಗಬೇಕು. ಪ್ರತಿ ರೈತನಿಗೆ ಅವರ ಭೂವಿಸ್ತೀರ್ಣಕ್ಕೆ ಅನುಗುಣವಾಗಿ ಪ್ರತಿ ಎಕರೆಗೆ ಒಂದು ಚೀಲ ಯೂರಿಯಾ ವಿತರಿಸಲು ಸರ್ಕಾರ ಸೂಚಿಸಿದೆ.
ರಸಗೊಬ್ಬರಗಳ ಸಾಕಷ್ಟು ದಾಸ್ತಾನು
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಸುಮಾರು 27,642 ಟನ್ ಯೂರಿಯಾ ಬೇಡಿಕೆ ಅಂದಾಜಿಸಲಾಗಿದೆ. ಪ್ರಸ್ತುತ 6,612.62 ಮೆಟ್ರಿಕ್ ಟನ್ ಯೂರಿಯಾ ದಾಸ್ತಾನು ಲಭ್ಯವಿದ್ದು, ಡಿಎಪಿ 4,526.72 ಟನ್, ಪೊಟ್ಯಾಶ್ 2,562.16 ಟನ್, ಕಾಂಪ್ಲೆಕ್ಸ್ ಗೊಬ್ಬರ 11,299.31 ಟನ್ ಮತ್ತು ಎಸ್ಎಸ್ಪಿ 453.95 ಟನ್ ದಾಸ್ತಾನು ಇದೆ. ಒಟ್ಟಾರೆ 24,793.76 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳು ಜಿಲ್ಲೆಯಲ್ಲಿ ಲಭ್ಯವಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
2.82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ
ಈ ಸಾಲಿನ ಮುಂಗಾರು ಹಂಗಾಮಿನಲ್ಲಿ ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಒಟ್ಟು 2,82,677 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಭತ್ತ, ಜೋಳ, ಮುಸುಕಿನ ಜೋಳ, ತೊಗರಿ, ಹೆಸರು, ಉದ್ದು, ಶೇಂಗಾ, ಸೋಯಾಅವರೆ, ಹತ್ತಿ ಮತ್ತು ಕಬ್ಬು ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಬೆಳೆಯಲಿದ್ದಾರೆ.
31 ಕೇಂದ್ರಗಳಲ್ಲಿ ಬೀಜ ವಿತರಣೆ
ರೈತರಿಗೆ ಅಗತ್ಯ ಬೀಜಗಳನ್ನು 14 ರೈತ ಸಂಪರ್ಕ ಕೇಂದ್ರಗಳು ಹಾಗೂ 17 ಹೆಚ್ಚುವರಿ ಕೇಂದ್ರಗಳ ಮೂಲಕ ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ಬೀಜ ಖರೀದಿಸುವಾಗ ರೈತರು ಫ್ರೂಟ್ ಐಡಿ ನೀಡುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
539 ಪರಿಶೀಲನೆ; 7 ಲೈಸನ್ಸ್ ರದ್ದು
ಜಿಲ್ಲೆಯಲ್ಲಿ ರಸಗೊಬ್ಬರ ಮತ್ತು ಬೀಜ ಮಾರಾಟದ ಮೇಲ್ವಿಚಾರಣೆಗೆ ಕೃಷಿ ಇಲಾಖೆ ಹಾಗೂ ವಿಚಕ್ಷಣ ದಳಗಳು ಈಗಾಗಲೇ 539 ಪರಿಶೀಲನಾ ಭೇಟಿಗಳನ್ನು ನಡೆಸಿವೆ. ನಿಯಮ ಉಲ್ಲಂಘಿಸಿದ 126 ಕೇಂದ್ರಗಳಿಗೆ ನೋಟಿಸ್ ನೀಡಲಾಗಿದ್ದು, 93 ಅಂಗಡಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಯಾಗಿದೆ. 7 ಮಾರಾಟ ಕೇಂದ್ರಗಳ ಲೈಸನ್ಸ್ ರದ್ದುಪಡಿಸಲಾಗಿದೆ.
ಎಂಆರ್ಪಿ ದರಕ್ಕಿಂತ ಹೆಚ್ಚು ವಸೂಲಿ ಮಾಡಿದರೆ ಕ್ರಮ
ಮಾರಾಟಗಾರರು ರೈತರಿಗೆ ಕೇಳಿದ ಗೊಬ್ಬರವನ್ನು ಎಂಆರ್ಪಿ ದರದಲ್ಲೇ ನೀಡಬೇಕು. ಹೆಚ್ಚುವರಿ ಶುಲ್ಕ ವಿಧಿಸುವುದು, ರಶೀದಿ ನೀಡದಿರುವುದು, ದರ ಹಾಗೂ ದಾಸ್ತಾನು ವಿವರ ಪ್ರದರ್ಶಿಸದಿರುವುದು ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು. ಪರವಾನಿಗೆ ಇಲ್ಲದೆ ಗೊಬ್ಬರ ಮಾರಾಟ ಮಾಡಿದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.