ಸಣ್ಣ ಕೈಗಾರಿಕೆಗಳ ಬೆಳವಣಿಗೆಯಿಂದ ದೇಶದ ಆರ್ಥಿಕತೆಗೆ ಬಲ : ಗೃಹ ಸಚಿವ ಜಿ. ಪರಮೇಶ್ವರ
ತುಮಕೂರು, 22 ಮೇ (ಹಿ.ಸ.) : ಆ್ಯಂಕರ್ : ಗೃಹ ಸಚಿವ ಜಿ. ಪರಮೇಶ್ವರ ಅವರು ತುಮಕೂರು ನಗರದ ಅಮಾನಿಕೆರೆ ಗಾಜಿನ ಮನೆ ಆವರಣದಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ಆಯೋಜಿಸಲಾಗಿದ್ದ ‘ದಕ್ಷಿಣ ಭಾರತ ಎಂಎಸ್ಎಂಇ ಸಮಾವೇಶ-2026’ ಹಾಗೂ ವಸ್ತುಪ್ರದರ್ಶನ ಮಳಿಗೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್
ಸಮಾವೇಶ


ತುಮಕೂರು, 22 ಮೇ (ಹಿ.ಸ.) :

ಆ್ಯಂಕರ್ : ಗೃಹ ಸಚಿವ ಜಿ. ಪರಮೇಶ್ವರ ಅವರು ತುಮಕೂರು ನಗರದ ಅಮಾನಿಕೆರೆ ಗಾಜಿನ ಮನೆ ಆವರಣದಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ಆಯೋಜಿಸಲಾಗಿದ್ದ ‘ದಕ್ಷಿಣ ಭಾರತ ಎಂಎಸ್ಎಂಇ ಸಮಾವೇಶ-2026’ ಹಾಗೂ ವಸ್ತುಪ್ರದರ್ಶನ ಮಳಿಗೆಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಅತ್ಯಂತ ಮಹತ್ತರವಾಗಿದೆ ಎಂದು ಹೇಳಿದರು. ದೇಶದಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಸಣ್ಣ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದ್ದು, 25 ಕೋಟಿಗೂ ಅಧಿಕ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿವೆ ಎಂದು ತಿಳಿಸಿದರು.

ಸಣ್ಣ ಕೈಗಾರಿಕೆ ಕ್ಷೇತ್ರವನ್ನು ಇನ್ನಷ್ಟು ಉತ್ತೇಜನ ನೀಡಿ ಬೆಳೆಸಿದರೆ, ದೇಶದ ಆರ್ಥಿಕತೆಗೆ ದೊಡ್ಡ ಮಟ್ಟದ ಕೊಡುಗೆ ದೊರೆಯಲಿದೆ ಎಂದು ಅಭಿಪ್ರಾಯಪಟ್ಟ ಅವರು, ಕೈಗಾರಿಕೆಗಳು ಕಾಲಾನುಗುಣವಾಗಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು. ವಿಶೇಷವಾಗಿ ಕೃತಕ ಬುದ್ಧಿಮತ್ತೆ ಸೇರಿದಂತೆ ಆಧುನಿಕ ತಂತ್ರಜ್ಞಾನಗಳ ಬಳಕೆ ಕೈಗಾರಿಕಾ ಕ್ಷೇತ್ರದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲಿದೆ ಎಂದು ಹೇಳಿದರು.

ತುಮಕೂರು ಜಿಲ್ಲೆ ವೇಗವಾಗಿ ಬೆಳೆಯುತ್ತಿರುವ ಕೈಗಾರಿಕಾ ಹಾಗೂ ನಗರಾಭಿವೃದ್ಧಿಯ ಕೇಂದ್ರವಾಗುತ್ತಿದೆ ಎಂದು ಹೇಳಿದ ಪರಮೇಶ್ವರ, ತುಮಕೂರು ಮೆಟ್ರೋ ರೈಲು ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ನೀಡಿದರು. ಯೋಜನೆಯ ಡಿಪಿಆರ್ (ವಿವರವಾದ ಯೋಜನಾ ವರದಿ) ಈಗಾಗಲೇ ಸಿದ್ಧಗೊಂಡಿದ್ದು, ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಯೋಜನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಸಮಾವೇಶದಲ್ಲಿ ದಕ್ಷಿಣ ಭಾರತದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಕೈಗಾರಿಕೋದ್ಯಮಿಗಳು, ಉದ್ಯಮಿಗಳು ಹಾಗೂ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು. ವಸ್ತುಪ್ರದರ್ಶನ ಮಳಿಗೆಯಲ್ಲಿ ಸಣ್ಣ ಕೈಗಾರಿಕೆಗಳ ವಿವಿಧ ಉತ್ಪನ್ನಗಳು, ತಂತ್ರಜ್ಞಾನಗಳು ಹಾಗೂ ನವೀನ ಆವಿಷ್ಕಾರಗಳು ಪ್ರದರ್ಶನಕ್ಕಿಡಲಾಗಿದ್ದವು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande