ಕರ್ನಾಟಕ ರಾಜ್ಯ ಆಹಾರ ಆಯೋಗದ ಸಭೆ
ಕೊಪ್ಪಳ , 22 ಮೇ (ಹಿ.ಸ.) : ಆ್ಯಂಕರ್ : ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಶೌಚಾಲಯಗಳು ಸೇರಿದಂತೆ ಎಲ್ಲಾ ಕಡೆಗೆ ಶುಚಿತ್ವ ಕಾಣಬೇಕು. ಕೈಗೊಂಡ ಎಲ್ಲ ಕ್ರಮಗಳ ಬಗ್ಗೆ ಭಾವಚಿತ್ರ ಸಮೇತ ಜಿಲ್ಲಾಧಿಕಾರಿಗಳಿಗೆ ವರದಿ
Meeting by Karnataka State Food Commission


ಕೊಪ್ಪಳ , 22 ಮೇ (ಹಿ.ಸ.) :

ಆ್ಯಂಕರ್ : ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಶೌಚಾಲಯಗಳು ಸೇರಿದಂತೆ ಎಲ್ಲಾ ಕಡೆಗೆ ಶುಚಿತ್ವ ಕಾಣಬೇಕು. ಕೈಗೊಂಡ ಎಲ್ಲ ಕ್ರಮಗಳ ಬಗ್ಗೆ ಭಾವಚಿತ್ರ ಸಮೇತ ಜಿಲ್ಲಾಧಿಕಾರಿಗಳಿಗೆ ವರದಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ.ಹೆಚ್.ಕೃಷ್ಣ ಅವರು ಕಿಮ್ಸನ ಬೋಧಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯತ್ನ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಆಹಾರ ಇಲಾಖೆ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಆಕಸ್ಮಿಕ ಭೇಟಿ ವೇಳೆ ಎಲ್ಲಾ ನ್ಯಾಯ ಬೆಲೆ ಅಂಗಡಿಗಳಲ್ಲಿ ಕಣ್ಣಿಗೆ ಅಶುಚಿತ್ವ ರಾಚಿತು. ಇದು ನಿಮ್ಮ ಗಮನಕ್ಕೆ ಬಂದಿಲ್ಲವೇ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದ ಅಧ್ಯಕ್ಷರು, ಅಂಗಡಿಯಲ್ಲಿ ಜಾಗ ಇಲ್ಲ ಎಂದು ಆಹಾರ ಪದಾರ್ಥಗಳ ಚೀಲಗಳನ್ನು ಎಲ್ಲೆಂದರಲ್ಲಿ ಬೀಸಾಕುವುದು ಅಶಿಸ್ತನ್ನು ತೋರುತ್ತದೆ ಎಂದರು. ಜಾಗೃತಿ ಸಮಿತಿ ಸದಸ್ಯರ ಫಲಕಗಳನ್ನು ಕಾಣುವಂತೆ ಹಾಕಬೇಕು ಎಂದು ಸೂಚನೆ ನೀಡಿದರು.

ಹಾಸ್ಟೇಲಗಳಿಗೆ ಭೇಟಿ ನೀಡಿದ ವೇಳೆ ವಸತಿ ನಿಲಯದಲ್ಲಿನ ವಿದ್ಯಾರ್ಥಿಗಳಿಗೆ ಕೆಲವು ಮೂಲ ಸೌಕರ್ಯ ಕಲ್ಪಿಸದೇ ಇರುವುದು ಕಂಡು ಬಂದಿದೆ. ಕೆಲ ವಸತಿ ನಿಲಯಗಳಲ್ಲಿ ಮಕ್ಕಳಿಗೆ ಶುದ್ಧ ನೀರು ಸಿಗುತ್ತಿಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಿಸಿಟಿವಿ ಕ್ಯಾಮರಾ ಅಳವಡಿಸಿಲ್ಲ. ರಾತ್ರಿ ಕಾವಲುಗಾರರು ಇಲ್ಲ. ಲೈಬ್ರರಿಗಳಲ್ಲಿ ಪುಸ್ತಕಗಳಿಲ್ಲ. ಕಂಪ್ಯೂಟರ್ ರೂಮಿನಲ್ಲಿ ಕಂಪ್ಯೂಟರಗಳು ಕಾಣುತ್ತಿಲ್ಲ. ಕೆಲವು ಕಡೆಗಳಲ್ಲಿ ಇರುವ ಕಂಪ್ಯೂಟರಗಳು ಕೆಟ್ಟು ಹೋಗಿವೆ. ನಿಯಮಿತವಾಗಿ ಮೊಟ್ಟೆ ನೀಡುತ್ತಿಲ್ಲ. ಆಹಾರವು ಶುಚಿ ಮತ್ತು ರುಚಿಯಾಗಿಲ್ಲ.

ಒಂದೇ ಕೋಣೆಯಲ್ಲಿ ಹತ್ತಕ್ಕು ಹೆಚ್ಚು ವಿದ್ಯಾರ್ಥಿಗಳನ್ನು ಇರಿಸಿರುವುದು ಕಂಡು ಬಂದಿದೆ. ತೆಗೆದುಕೊಂಡ ದಾಸ್ತಾನಿಗೂ ಬಳಕೆಯಾದ ದಾಸ್ತಾನಿಗೂ ತಾಳೆ ಆಗದಿರುವ ಎಷ್ಟೋ ಲೋಪಗಳ ಅಂಶಗಳನ್ನು ಹಾಸ್ಟೇಲಗಳ ಭೇಟಿ ವೇಳೆ ಕಂಡು ಬಂದಿವೆ. ಆದ್ದರಿಂದ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಉಪ ನಿರ್ದೇಶಕರು ಮತ್ತು ತಾಲೂಕಿನ ಅಧಿಕಾರಿಗಳು ಹಾಗು ಅಲ್ಪಸಂಖ್ಯಾತ ಕಲ್ಯಾಣ ಇಲಾಖಾಧಿಕಾರಿಗಳು ಮತ್ತು ತಾಲೂಕಿನ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಕೂಡಲೇ ಎಲ್ಲ ಪರಿಹಾರ ಕ್ರಮಗಳನ್ನು ತೆಗೆದುಕೊಂಡು ಜಿಲ್ಲಾಡಳಿತಕ್ಕೆ ವರದಿ ನೀಡಬೇಕು ಎಂದು ಅಧ್ಯಕ್ಷರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಮಧ್ಯಾಹ್ನ ಬಿಸಿ ಊಟ ಯೋಜನೆಯು ವಿದ್ಯಾರ್ಥಿಗಳಿಗೆ ಸಾಕಷ್ಟು ಉಪಯುಕ್ತವಾಗಿದೆ. ಆದರೆ ಈ ಯೋಜನೆಯನ್ನು ಅನುಷ್ಠಾನ ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವುದು ಕಾಣುತ್ತಿದೆ. ಆಹಾರ ಸಾಮಗ್ರಿಗಳ ಖರೀದಿಗೆ ಸಂಬಂಧಿಸಿದ ದಾಸ್ತಾನು ಸ್ವೀಕೃತಿ ವಹಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ನಾಮಕಾವಾಸ್ತೆ ಅನ್ನುವ ಹಾಗೆ ಆಹಾರ ನೀಡುವ ಮೆನು ಹಾಕಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪಾಲಕರ ಕೋರಿಕೆ ಮತ್ತು ವಿದ್ಯಾರ್ಥಿಗಳ ಮನವಿಗೆ ಮಾನ್ಯತೆ ನೀಡಿ ಎಲ್ಲ ಶಾಲೆಗಳಲ್ಲಿ ಮೊಟ್ಟೆಯನ್ನು ಕಡ್ಡಾಯಗೊಳಿಸಬೇಕು ಎಂದು ಸೂಚನೆ ನೀಡಿದರು.

ವಸತಿ ನಿಲಯಗಳಲ್ಲಿ ಹೆಚ್ಚಾಗಿ ರೈಸ್ ಊಟವನ್ನೇ ನೀಡುತ್ತಾರೆ ಎಂದು ವಿದ್ಯಾರ್ಥಿಗಳು ದೂರುತಿದ್ದು, ಇದನ್ನು ಸರಿಪಡಿಸಬೇಕು. ಚಪಾತಿ, ರೊಟ್ಟಿ ಸಮೇತ ಗುಣಮಟ್ಟದ ಊಟ ನೀಡಲು ಕ್ರಮ ವಹಿಸಬೇಕು ಎಂದು ಆಯೋಗದ ಸದಸ್ಯರಾದ ಮಾರುತಿ ಎಂ ದೊಡ್ಡಲಿಂಗಣ್ಣವರ ತಿಳಿಸಿದರು.

ಆಹಾರ ತಯಾರಿಕೆಯನ್ನು ಅಚ್ಚುಕಟ್ಟಾಗಿ ಮಾಡುವ ಬಗ್ಗೆ ಮತ್ತು ರುಚಿ ಶುಚಿಯಾದ ಆಹಾರ ತಯಾರಿಕೆಯ ಬಗ್ಗೆ ವಸತಿ ನಿಲಯಗಳಲ್ಲಿನ ಅಡುಗೆದಾರರಿಗೆ ಕಾಲಕಾಲಕ್ಕೆ ಅರಿವು ಮೂಡಿಸುವ ಕಾರ್ಯಕ್ರಮ ರೂಪಿಸಬೇಕು ಎಂದು ಸದಸ್ಯರಾದ ಕೆ.ಎಸ್.ವಿಜಯಲಕ್ಷ್ಮಿ ಅವರು ಸೂಚನೆ ನೀಡಿದರು.

ಒಂದು ತಿಂಗಳ ಗಡುವು : ಈ ವೇಳೆ ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಬಿ ಇಟ್ನಾಳ ಅವರು ಮಾತನಾಡಿ, ಕರ್ನಾಟಕ ರಾಜ್ಯ ಆಹಾರ ಆಯೋಗವು ಕೊಪ್ಪಳ ಜಿಲ್ಲೆಗೆ ಆಗಮಿಸಿ, ವಿವಿಧೆಡೆ ಆಕಸ್ಮಿಕ ಭೇಟಿ ಕೈಗೊಂಡು ಗುರುತಿಸಿದ ಲೋಪಗಳ ಬಗ್ಗೆ ಸಭೆಯ ಗಮನಕ್ಕೆ ತಂದಿದ್ದಾರೆ. ಆಯಾ ಇಲಾಖೆಗಳ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಈ ವಿಷಯಕ್ಕೆ ಮೊದಲಾದ್ಯತೆ ನೀಡಿ, ಕೈಗೊಂಡ ಕ್ರಮಗಳ ಬಗ್ಗೆ ವರದಿಯನ್ನು ಒಂದು ತಿಂಗಳೊಳಗೆ ಜಿಲ್ಲಾಡಳಿತಕ್ಕೆ ಮತ್ತು ಜಿಲ್ಲಾ ಪಂಚಾಯತ್ ಸಿಇಓ ಅವರಿಗೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಗಡುವು ವಿದಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ವರ್ಣಿತ್ ನೇಗಿ, ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಸುಮಂತ್ ರಾವ್, ಎ.ರೋಹಿಣಿ ಪ್ರಿಯ, ಹೆಚ್ಚುವರಿ ಜಿಲ್ಲಾ ಪೆÇಲೀಸ್ ವμÁ್ಠಧಿಕಾರಿ ಆರ್.ಹೇಮಂತ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಅಜ್ಜಪ್ಪ ಸೋಗಲದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬದ ಕಲ್ಯಾಣಾಧಿಕಾರಿಗಳಾದ ಡಾ. ಟಿ.ಲಿಂಗರಾಜು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಜ್ಮೀರ ಅಲಿ, ಕೊಪ್ಪಳ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಅಂಕಿತ ಅಧಿಕಾರಿಗಳಾದ ಡಾ. ಅಲಕನಂದ ಮಳಗಿ, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಆಹಾರ ಇಲಾಖೆ ಉಪನಿರ್ದೇಶಕರಾದ ವಿಶ್ವನಾಥಗೌಡ ಎಂ.ಎನ್. ಅವರು ಸ್ವಾಗತಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande