

ಕೊಪ್ಪಳ, 22 ಮೇ (ಹಿ.ಸ.) :
ಆ್ಯಂಕರ್ : ಹತ್ತು ತಿಂಗಳ ಮುಂಚೆಯೇ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಬಿಡುಗಡೆಗೊಳಿಸಿರುವ ಕ್ರಮ ಖಂಡಿಸಿ, ಜೂನ್ನಲ್ಲಿ ನಡೆಯಲಿರುವ ಪದವಿ ಪರೀಕ್ಷಾ ಕಾರ್ಯ ಹಾಗೂ ಮೌಲ್ಯಮಾಪನ ಕಾರ್ಯವನ್ನು ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘ ಬಹಿಷ್ಕರಿಸಿದೆ.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ಸಂಘದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಡಾ.ವೀರಣ್ಣ ಸಜ್ಜನರ್, ಕೊಪ್ಪಳ ವಿಶ್ವವಿದ್ಯಾಲಯ ಅತಿಥಿ ಉಪನ್ಯಾಸಕರನ್ನು ಪಾಠ-ಪ್ರವಚನಗಳಿಗೆ ಹೊರತುಪಡಿಸಿ ಬೇರೆ ಕಾರ್ಯಗಳಿಗೆ ಬಳಸಿಕೊಳ್ಳಲು ಒಪ್ಪಿಕೊಳ್ಳುತ್ತಿಲ್ಲ. ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳ ಬಗ್ಗೆ ಅಸಡ್ಡೆ ತೋರುತ್ತದೆ ಎಂದು ದೂರಿದರು.
ಕಳೆದ ಹಲವು ವರ್ಷಗಳಿಂದಲೂ ವಿವಿಧ ವಿಷಯಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇಂದು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿರುತ್ತದೆ. ಈ ಹಿಂದೆ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕರನ್ನು ಬಿಒಇ. ಸ್ಕ್ಯಾಡ್ ಸೇರಿದಂತೆ ವಿವಿಧ ಪರೀಕ್ಷಾ ಕಾರ್ಯಗಳಲ್ಲಿ ಸಮರ್ಥವಾಗಿ ಬಳಸಿಕೊಳ್ಳಲಾಗುತ್ತಿತ್ತು. ಆದರೆ ಕೊಪ್ಪಳ ವಿಶ್ವವಿದ್ಯಾಲಯವು ಪರೀಕ್ಷಾ ಕಾರ್ಯದಂಥ ಗಂಭೀರ ವಿಷಯಗಳಲ್ಲಿ ಅತಿಥಿ ಉಪನ್ಯಾಸಕರನ್ನು ನಿರ್ಲಕ್ಷಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ ಎಂದು ಅವರು ಆರೋಪಿಸಿದರು.
ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಈಗಲೂ ಅತಿಥಿ ಉಪನ್ಯಾಸಕರನ್ನು ಈ ಮೇಲೆ ಸೂಚಿಸಿದ ಕಾರ್ಯಗಳಿಗೆ ನಂಬಿಕೆಯಿಂದ ಬಳಸಿಕೊಳ್ಳಲಾಗುತ್ತಿದೆ. ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಕಳೆದ 2023-24ನೇ ಸಾಲಿನಿಂದಲೂ ಈ ಕುರಿತು ಮನವಿ ಸಲ್ಲಿಸಿದಾಗ್ಯೂ ನಮ್ಮ ಮನವಿಯನ್ನು ಪರಿಗಣಿಸದೇ ಮತ್ತು ಜಿಲ್ಲೆಯ ಅತಿಥಿ ಉಪನ್ಯಾಸಕರ ಮೇಲೆ ವಿಶ್ವಾಸವಿಲ್ಲ ಎನ್ನುವ ಧೋರಣೆ ತಾಳಿರುವುದು ನಮಗೆ ಅತ್ಯಂತ ನೋವು ತಂದಿದೆ. ಲೋಪಗಳಾದರೆ ಯಾರು ಜವಾಬ್ದಾರಿ? ಎಂದು ಪ್ರಶ್ನಿಸುವ ವಿಶ್ವವಿದ್ಯಾಲಯಕ್ಕೆ ಪಾಠ-ಪ್ರವಚನಗಳಲ್ಲಿ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿದವರು ಯಾರು ಎಂಬುದನ್ನು ಅರಿತುಕೊಳ್ಳುವ ಸಮಯವೂ ಇಲ್ಲದಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.
ಅತಿಥಿ ಉಪನ್ಯಾಸಕರನ್ನು ಹತ್ತು ಕೊಪ್ಪಳ ತಿಂಗಳವರೆಗೆ ಮುಂದುವರಿಸದೇ ಮಧ್ಯದಲ್ಲಿ ಬಿಡುಗಡೆಗೊಳಿಸಿರುವುದರಿಂದ ವಿಶ್ವವಿದ್ಯಾಲಯದ ವ್ಯಾಪ್ತಿಯ ಎಲ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು 2025-26ನೇ ಸಾಲಿನ ಪರೀಕ್ಷಾ ಕಾರ್ಯ ಮತ್ತು ಮೌಲ್ಯಮಾಪನ ಕಾರ್ಯವನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದರು.
ಅತಿಥಿ ಉಪನ್ಯಾಸಕರನ್ನು ಬಿಒಇ, ಸ್ಮಾಡ್ ಸೇರಿದಂತೆ ಪರೀಕ್ಷೆಯ ಎಲ್ಲ ಹಂತಗಳ ವಿವಿಧ ಕಾರ್ಯಗಳಲ್ಲಿ ನಮ್ಮನ್ನು ಪರಿಗಣಿಸುವಂತೆ ಮತ್ತು ಹತ್ತು ತಿಂಗಳುಗಳ ಕಾಲ ಸೇವೆಯಲ್ಲಿ ಮುಂದುವರಿಸುವಂತೆ ಆಗ್ರಹಿಸಿ ಕಾಲೇಜಿನ ಪ್ರಾಚಾರ್ಯರ ಮೂಲಕ ಆಯುಕ್ತರಿಗೆ, ಕುಲಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಅತಿಥಿ ಉಪನ್ಯಾಸಕರಾದ ಡಾ.ಪ್ರಕಾಶ ಬಳ್ಳಾರಿ, ಡಾ.ತುಕಾರಾಂ ನಾಯ್ಕ, ಡಾ.ಸಣ್ಣದೇವೇಂದ್ರಸ್ವಾಮಿ, ಡಾ.ಶಿವಬಸಪ್ಪ ಮಸ್ಕಿ, ಜ್ಞಾನೇಶ್ವರ ಪತ್ತಾರ, ಡಾ.ಪ್ರಕಾಶ ಜಡಿಯವರ್, ಡಾ.ವಿಜಯಕುಮಾರ್ ಕೆಂಚಪ್ಪನವರ್, ಡಾ.ಗಿರಿಜಾ ತುರುಮುರಿ, ಡಾ.ವಿಪ್ಲವಿ, ಅಕ್ಕಮಹಾದೇವಿ, ವಿದ್ಯಾ ಮುಳಗುಂದ, ಡಾ.ವಾಣಿ ಜೋಷಿ, ಬಸಮ್ಮ, ರಾಜ್, ಡಾ.ಷಣ್ಮುಖಪ್ಪ, ಬಸವರಾಜ ಕರುಗಲ್, ಡಾ.ಪಾಂಡೇಶ್ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್