
ಗದಗ, 22 ಮೇ (ಹಿ.ಸ.) :
ಆ್ಯಂಕರ್ : ಗ್ರಾಮೀಣ ಬಡಜನರ ಜೀವನೋಪಾಯಕ್ಕೆ ಆಸರೆಯಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯದವರು ಹೆಚ್ಚಿನ ಪ್ರಮಾಣದಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಬನಹಟ್ಟಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ ಗಣಿ ಕರೆ ನೀಡಿದರು.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಬನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬನಹಟ್ಟಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಸಮುದಾಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ ಯೋಜನೆಯ ಮಹತ್ವವನ್ನು ವಿವರಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗದ ಅಭಾವ ಹಾಗೂ ಬೇಸಿಗೆ ಕಾಲದಲ್ಲಿ ಕೃಷಿ ಚಟುವಟಿಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಅನೇಕ ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ನರೇಗಾ ಯೋಜನೆ ಗ್ರಾಮೀಣ ಜನತೆಗೆ ಆರ್ಥಿಕ ಭದ್ರತೆ ಒದಗಿಸುವ ಪ್ರಮುಖ ಯೋಜನೆಯಾಗಿದ್ದು, ವಿಶೇಷವಾಗಿ ಎಸ್ಸಿ-ಎಸ್ಟಿ ಸಮುದಾಯದ ಕಾರ್ಮಿಕರು ಯೋಜನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ನರೇಗಾ ಯೋಜನೆಯಡಿ ಪ್ರಸ್ತುತ ಬೇಸಿಗೆ ಅವಧಿಯಲ್ಲಿ ರೈತರ ಹೊಲಗಳಲ್ಲಿ ಬದು ನಿರ್ಮಾಣ ಕಾರ್ಯ ಕೈಗೊಳ್ಳಲಾಗುತ್ತಿದೆ. ಇದರಿಂದ ಕೃಷಿ ಭೂಮಿಯಲ್ಲಿ ಮಣ್ಣಿನ ಸಂರಕ್ಷಣೆ, ನೀರಿನ ಸಂಗ್ರಹಣೆ ಹಾಗೂ ಭೂಮಿಯ ಫಲವತ್ತತೆ ಹೆಚ್ಚಿಸಲು ಸಹಕಾರಿಯಾಗುತ್ತದೆ. ಎಸ್ಸಿ-ಎಸ್ಟಿ ಸಮುದಾಯದ ರೈತರು ಮತ್ತು ಕಾರ್ಮಿಕರು ತಮ್ಮ ಹೊಲಗಳಿಗೆ ಬದು ನಿರ್ಮಿಸಿಕೊಳ್ಳುವ ಮೂಲಕ ಯೋಜನೆಯ ಪ್ರಯೋಜನ ಪಡೆಯಬೇಕು ಎಂದು ಪಿಡಿಓ ಗಣಿ ಸಲಹೆ ನೀಡಿದರು.
“ಮಳೆ ಬರ್ತಿಲ್ಲ, ಕೂಲಿ ಕೆಲಸ ಸಿಗುತ್ತಿಲ್ಲ ಎಂದು ಯಾರೂ ಆತಂಕಪಡುವ ಅಗತ್ಯವಿಲ್ಲ. ಗ್ರಾಮ ಪಂಚಾಯತಿ ವತಿಯಿಂದ ಮಳೆ ಆರಂಭವಾಗುವವರೆಗೂ ನರೇಗಾ ಯೋಜನೆಯಡಿ ಕೆಲಸ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಅರ್ಹ ಕಾರ್ಮಿಕರು ಈ ಅವಕಾಶವನ್ನು ಬಳಸಿಕೊಳ್ಳಬೇಕು,” ಎಂದು ಅವರು ತಿಳಿಸಿದರು.
ನರೇಗಾ ಯೋಜನೆಯಡಿ ಉದ್ಯೋಗ ಪಡೆಯಲು ಅಗತ್ಯವಿರುವ ಜಾಬ್ ಕಾರ್ಡ್ಗಳನ್ನು ಗ್ರಾಮ ಪಂಚಾಯತಿ ವತಿಯಿಂದ ಉಚಿತವಾಗಿ ನೀಡಲಾಗುತ್ತಿದೆ. ಅಲ್ಲದೆ ಕೆಲಸಕ್ಕೆ ಹಾಜರಾಗುವ ಕಾರ್ಮಿಕರು ತಮ್ಮ ಉದ್ಯೋಗ ಚೀಟಿ ಹೊಂದಿರುವುದರ ಜೊತೆಗೆ ಇ-ಕೆವೈಸಿ ಪ್ರಕ್ರಿಯೆ ಕಡ್ಡಾಯವಾಗಿ ಪೂರ್ಣಗೊಳಿಸಿರಬೇಕು ಎಂದು ಮಾಹಿತಿ ನೀಡಿದರು.
ಪ್ರಸ್ತುತ ಯೋಜನೆಯಡಿ ದಿನಕ್ಕೆ 370 ರೂಪಾಯಿ ಕೂಲಿ ಮೊತ್ತವನ್ನು ಗಂಡು-ಹೆಣ್ಣು ಸಮಾನವಾಗಿ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದ ಜನರು ಬೇಸಿಗೆ ಸಮಯದಲ್ಲಿ ಕೂಲಿ ಕೆಲಸಕ್ಕಾಗಿ ಬೇರೆ ಊರುಗಳಿಗೆ ವಲಸೆ ಹೋಗದೇ ತಮ್ಮ ಗ್ರಾಮದಲ್ಲೇ ನರೇಗಾ ಯೋಜನೆಯಡಿ ಉದ್ಯೋಗ ಪಡೆದು ಕುಟುಂಬ ನಿರ್ವಹಣೆ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಬನಹಟ್ಟಿ ಗ್ರಾಮ ಪಂಚಾಯತಿ ವತಿಯಿಂದ ಪಿಡಿಓ ಮಂಜುನಾಥ ಗಣಿ ಅವರ ನೇತೃತ್ವದಲ್ಲಿ ನರೇಗಾ ಐಇಸಿ (ಮಾಹಿತಿ, ಶಿಕ್ಷಣ ಮತ್ತು ಸಂವಹನ) ಚಟುವಟಿಕೆಗಳ ಮೂಲಕ ಗ್ರಾಮದಲ್ಲಿನ ಎಸ್ಸಿ-ಎಸ್ಟಿ ಕಾಲೋನಿಗಳಲ್ಲಿ ವಿಶೇಷ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈ ಅಭಿಯಾನದ ಪರಿಣಾಮವಾಗಿ ಶುಕ್ರವಾರ ಒಂದೇ ದಿನ 60ಕ್ಕೂ ಹೆಚ್ಚು ಎಸ್ಸಿ-ಎಸ್ಟಿ ಸಮುದಾಯದ ನರೇಗಾ ಕಾರ್ಮಿಕರು ಕೆಲಸಕ್ಕೆ ಹಾಜರಾಗಿರುವುದು ಗಮನಾರ್ಹವಾಗಿದೆ.
ಈ ಬೆಳವಣಿಗೆ ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆ ಬಗ್ಗೆ ಜಾಗೃತಿ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.
ಈ ಸಂದರ್ಭದಲ್ಲಿ ಬನಹಟ್ಟಿ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಮಾಳಪ್ಪ ಪೂಜಾರ, ಸಿಬ್ಬಂದಿ ಶಿವನಪ್ಪ ಕಲ್ಲಾಪೂರ, ನರೇಗಾ ಸಿಬ್ಬಂದಿಗಳಾದ ಸುನೀಲ ಶಿರೋಳ, ಮಂಜುನಾಥ ನಾಡಗೌಡ ಹಾಗೂ ಕಾಯಕಬಂಧು ತಳವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP