4 ಬಗೆಯಲ್ಲಿ ಕಸ ವಿಂಗಡಣೆ ಕಡ್ಡಾಯ
ನಿಯಮ ಉಲ್ಲಂಘಿಸಿದರೆ,ಕ್ರಿಮಿನಲ್ ಪ್ರಕರಣ: ದಾವಣಗೆರೆ ಪಾಲಿಕೆ ಆಯುಕ್ತ ಎಚ್ಚರಿಕೆ
4 ಬಗೆಯಲ್ಲಿ ಕಸ ವಿಂಗಡಣೆ ಕಡ್ಡಾಯ


ದಾವಣಗೆರೆ, 22 ಮೇ (ಹಿ.ಸ.) :

ಆ್ಯಂಕರ್ : ದಾವಣಗೆರೆ ನಗರವನ್ನು ಸ್ವಚ್ಛ, ತ್ಯಾಜ್ಯಮುಕ್ತ ಹಾಗೂ ಆರೋಗ್ಯಕರ ನಗರವನ್ನಾಗಿ ರೂಪಿಸುವ ಉದ್ದೇಶದಿಂದ ಸಾರ್ವಜನಿಕರು ತಮ್ಮ ಮನೆ ಹಾಗೂ ಉದ್ದಿಮೆಗಳಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯವನ್ನು ಕಡ್ಡಾಯವಾಗಿ ಮೂಲದಲ್ಲಿಯೇ ನಾಲ್ಕು ಬಗೆಯಲ್ಲಿ ವಿಂಗಡಿಸಿ ಮಹಾನಗರಪಾಲಿಕೆಯ ಕಸ ಸಂಗ್ರಹಣಾ ವಾಹನಗಳಿಗೆ ನೀಡಬೇಕು ಎಂದು ಮಹಾನಗರಪಾಲಿಕೆ ಆಯುಕ್ತ ಡಾ. ಮಹಾಂತೇಶ್ ಎನ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಪ್ರಕಟಣೆ ಹೊರಡಿಸಿರುವ ಅವರು, ತ್ಯಾಜ್ಯವನ್ನು ಕೊಳೆಯುವ ಹಸಿತ್ಯಾಜ್ಯ, ಕೊಳೆಯದ ಒಣತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ ಹಾಗೂ ವಿಶೇಷ ಆರೈಕೆ ತ್ಯಾಜ್ಯ ಎಂಬ ನಾಲ್ಕು ವಿಭಾಗಗಳಲ್ಲಿ ಪ್ರತ್ಯೇಕವಾಗಿ ವಿಂಗಡಿಸುವುದು ಕಡ್ಡಾಯ ಎಂದು ತಿಳಿಸಿದ್ದಾರೆ.

ಒಣತ್ಯಾಜ್ಯದಲ್ಲಿ ಮರುಬಳಕೆಗೆ ಯೋಗ್ಯ ಹಾಗೂ ದಹನಕಾರಿ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಂಗಡಿಸಬೇಕು. ಸ್ಯಾನಿಟರಿ ತ್ಯಾಜ್ಯವನ್ನು ಬಳಸಿದ ತಕ್ಷಣ ಕಂಪನಿ ಒದಗಿಸಿದ ಪೌಚ್ ಅಥವಾ ಪಾಲಿಕೆ ಸೂಚಿಸಿದ ವಿಧಾನದಲ್ಲಿ ಸುರಕ್ಷಿತವಾಗಿ ಸುತ್ತಿ ನೀಡಬೇಕು ಎಂದು ತಿಳಿಸಿದ್ದಾರೆ.

ಬೃಹತ್ ತ್ಯಾಜ್ಯ ಉತ್ಪಾದಕರಿಗೆ ವಿಶೇಷ ನಿಯಮ

ಹೋಟೆಲ್, ಕಲ್ಯಾಣ ಮಂಟಪ, ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು ಹಾಗೂ ವಸತಿ ಸಮುಚ್ಚಯಗಳು ದಿನಕ್ಕೆ 100 ಕೆಜಿಗಿಂತ ಹೆಚ್ಚು ತ್ಯಾಜ್ಯ ಉತ್ಪಾದಿಸಿದರೆ, 20 ಸಾವಿರ ಚದರ ಮೀಟರ್ಗಿಂತ ಹೆಚ್ಚಿನ ವಿಸ್ತೀರ್ಣ ಹೊಂದಿದ್ದರೆ ಅಥವಾ ದಿನಕ್ಕೆ 40 ಸಾವಿರ ಲೀಟರ್ಗಿಂತ ಹೆಚ್ಚು ನೀರು ಬಳಕೆ ಮಾಡಿದರೆ ಅವರನ್ನು ‘ಬೃಹತ್ ತ್ಯಾಜ್ಯ ಉತ್ಪಾದಕರು’ ಎಂದು ಪರಿಗಣಿಸಲಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಇಂತಹ ಸಂಸ್ಥೆಗಳು ತಮ್ಮ ಆವರಣದಲ್ಲಿಯೇ ಹಸಿ ಕಸವನ್ನು ಕಾಂಪೋಸ್ಟ್ ಅಥವಾ ಬಯೋಗ್ಯಾಸ್ ವಿಧಾನದಲ್ಲಿ ಸಂಸ್ಕರಿಸಬೇಕು. ಜೊತೆಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಕೇಂದ್ರೀಕೃತ ಪೋರ್ಟಲ್ನಲ್ಲಿ BWG ಎಂದು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.

ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ

ರಸ್ತೆ, ಚರಂಡಿ ಹಾಗೂ ಖಾಲಿ ನಿವೇಶನಗಳಲ್ಲಿ ಕಸ ಎಸೆಯುವುದು ಅಥವಾ ಕಸಕ್ಕೆ ಬೆಂಕಿ ಹಚ್ಚುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಘನತ್ಯಾಜ್ಯ ನಿರ್ವಹಣೆ ಉಪವಿಧಿಗಳನ್ವಯ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ತಪ್ಪು ಮರುಕಳಿಸಿದರೆ ಪರಿಸರ ಸಂರಕ್ಷಣಾ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande