
ಬೆಂಗಳೂರು, 22 ಮೇ (ಹಿ.ಸ.) :
ಆ್ಯಂಕರ್ : ಕಲಬುರಗಿ ಜಿಲ್ಲೆಯ ಅಳಂದ ಕೋಮು ಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತೀವ್ರವಾಗಿ ಖಂಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ಮತ್ತು ಓಲೈಕೆ ರಾಜಕಾರಣದ ಪರಮಾವಧಿ ತಲುಪಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, ಕೋಮು ಗಲಭೆ ವೇಳೆ ಉದ್ರಿಕ್ತ ಗುಂಪೊಂದು ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ದಾಳಿ ನಡೆಸಿ, ಡಿಎಸ್ಪಿ ಹಾಗೂ ಪೊಲೀಸ್ ಕಾನ್ಸ್ಟೇಬಲ್ಗಳಿಗೆ ಗಂಭೀರ ಗಾಯಗಳಾಗಿದ್ದವು ಎಂದು ಜೋಶಿ ಉಲ್ಲೇಖಿಸಿದ್ದಾರೆ. ಇಂತಹ ಗಂಭೀರ ಘಟನೆಗೆ ಸಂಬಂಧಿಸಿದ ಗಲಭೆಕೋರರನ್ನು ಸರ್ಕಾರ ಗೌರವಪೂರ್ವಕವಾಗಿ ಬಿಡುಗಡೆ ಮಾಡುತ್ತಿರುವಂತಾಗಿದೆ ಎಂದು ಟೀಕಿಸಿದ್ದಾರೆ.
ಅಳಂದ ಗಲಭೆ ಪ್ರಕರಣದ 100ಕ್ಕೂ ಹೆಚ್ಚು ಆರೋಪಿಗಳ ವಿರುದ್ಧ ದಾಖಲಾಗಿದ್ದ ಏಳು ಕ್ರಿಮಿನಲ್ ಪ್ರಕರಣಗಳನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂಪಡೆದಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ. ರೈತರು ಮತ್ತು ಕನ್ನಡಪರ ಹೋರಾಟಗಾರರ ವಿರುದ್ಧದ ಪ್ರಕರಣಗಳೊಂದಿಗೆ ಈ ಗಲಭೆ ಪ್ರಕರಣಗಳನ್ನು ಸೇರಿಸಿ ಜನರ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಕಾನೂನು ಪಾಲಿಸುವ ಸಾರ್ವಜನಿಕರ ರಕ್ಷಣೆಗೆ ಬದಲಾಗಿ ಕಾಂಗ್ರೆಸ್ ಪಕ್ಷಕ್ಕೆ ಗಲಭೆಕೋರರ ಓಲೈಕೆಯೇ ಮುಖ್ಯವಾಗಿದೆ ಎಂದು ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಕರ್ತವ್ಯ ನಿರತ ಪೊಲೀಸರಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾದರೆ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿ ಏನಾಗಲಿದೆ ಎಂದು ಪ್ರಶ್ನಿಸಿದ್ದಾರೆ.
ತುಷ್ಟೀಕರಣ ರಾಜಕಾರಣಕ್ಕಾಗಿ ಸಂವಿಧಾನ ಮತ್ತು ಕಾನೂನಿನ ಮೌಲ್ಯಗಳನ್ನು ಬಲಿಕೊಡಲಾಗುತ್ತಿದೆ ಎಂದು ಆರೋಪಿಸಿರುವ ಅವರು, ಇಂತಹ ಧೋರಣೆ ದೇಶಕ್ಕೆ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಎಚ್ಚರಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.