
ಬೆಂಗಳೂರು, 22 ಮೇ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ಬಿತ್ತನೆ ಬೀಜ ವಿತರಣೆಯಲ್ಲಿ ಉಂಟಾಗಿರುವ ಅವ್ಯವಸ್ಥೆ ಕುರಿತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಆರ್.ಅಶೋಕ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ರೈತರು ಪೊಲೀಸ್ ಭದ್ರತೆಯ ನಡುವೆ ಬಿತ್ತನೆ ಬೀಜ ಪಡೆಯುವ ದುಸ್ಥಿತಿ ಎದುರಾಗಿದೆ ಎಂದು ಆರೋಪಿಸಿದ್ದಾರೆ. ಬೀಜಕ್ಕಾಗಿ ರೈತರು ಹಗಲು-ರಾತ್ರಿ ಮನೆ ಬಿಟ್ಟು ವಾರಗಟ್ಟಲೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಕ್ಕೆ ಜೀವಂತ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ.
ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ಉಲ್ಲೇಖಿಸಿದ ಅಶೋಕ್, ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿರುವುದು ಆಶ್ಚರ್ಯದ ವಿಷಯವಲ್ಲ ಎಂದು ಹೇಳಿದ್ದಾರೆ. ರೈತರಿಗೆ ನಿರಂತರ ವಿದ್ಯುತ್ ಇಲ್ಲ, ಮಳೆ ಹಾಗೂ ಬರ ಪರಿಹಾರ ಸಮರ್ಪಕವಾಗಿ ದೊರೆಯುತ್ತಿಲ್ಲ. ಈಗ ಸರಿಯಾದ ಸಮಯಕ್ಕೆ ಬಿತ್ತನೆ ಬೀಜವೂ ಲಭ್ಯವಾಗದ ಸ್ಥಿತಿ ಉಂಟಾಗಿದೆ ಎಂದು ದೂರಿದ್ದಾರೆ.
ಸರ್ಕಾರ ತುಷ್ಟೀಕರಣ ರಾಜಕಾರಣ, ಸಾಧನಾ ಸಮಾವೇಶ ಹಾಗೂ ಗ್ಯಾರಂಟಿ ಸಮಿತಿ ಕಾರ್ಯಕ್ರಮಗಳಿಗೆ ಹಣ ವ್ಯಯಿಸುತ್ತಿದೆ. ಆದರೆ ಬೀಜ ವಿತರಣಾ ಕೇಂದ್ರಗಳಲ್ಲಿ ಕನಿಷ್ಠ ಮೂಲಸೌಕರ್ಯ ಒದಗಿಸಲು ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುವುದಕ್ಕಿಂತ ರೈತರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಹೆಚ್ಚಿನ ಗಮನ ಹರಿಸಬೇಕಿತ್ತು. ಹಾಗಾಗಿದ್ದರೆ ಇಂದು ಅನ್ನದಾತರಿಗೆ ಈ ರೀತಿಯ ಅವಮಾನಕರ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ಸರ್ಕಾರದ ಆದ್ಯತೆ ರೈತರ ಕಲ್ಯಾಣವಲ್ಲ, ರಾಜಕೀಯ ಲಾಭ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಸರ್ಕಾರ ತಕ್ಷಣವೇ ಬೀಜ ವಿತರಣೆಯ ಅವ್ಯವಸ್ಥೆಯನ್ನು ಸರಿಪಡಿಸದಿದ್ದರೆ ರೈತರು ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.