
ಬೆಂಗಳೂರು, 22 ಮೇ (ಹಿ.ಸ.) :
ಆ್ಯಂಕರ್ : ಬೆಂಗಳೂರು ಉತ್ತರ ವಲಯ ಪಾಲಿಕೆ ವಾರಾಂತ್ಯದ ಫೋನ್-ಇನ್ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ಸಾರ್ವಜನಿಕರಿಂದ ಬಂದ ಕುಂದುಕೊರತೆಗಳಿಗೆ ತ್ವರಿತ ಕ್ರಮ ಕೈಗೊಂಡು ಸಮಯೋಚಿತ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಯುಕ್ತರ ಕಚೇರಿಯಲ್ಲಿ ಬೆಳಿಗ್ಗೆ 7 ಗಂಟೆಯಿಂದ ನಡೆದ ಕಾರ್ಯಕ್ರಮದಲ್ಲಿ ನಾಗರಿಕರು ರಸ್ತೆ ನಿರ್ವಹಣೆ, ಘನ ತ್ಯಾಜ್ಯ ವಿಲೇವಾರಿ, ಅರಣ್ಯ ಸಮಸ್ಯೆಗಳು, ಇ-ಖಾತಾ ಸೇವೆಗಳು, ವಿದ್ಯುತ್, ಉದ್ಯಾನವನಗಳು ಸೇರಿದಂತೆ ವಿವಿಧ ನಾಗರಿಕ ಸೇವೆಗಳ ಕುರಿತ ಸಮಸ್ಯೆಗಳನ್ನು ಪ್ರಸ್ತಾಪಿಸಿದರು.
ಇಂದಿನ ಕಾರ್ಯಕ್ರಮದಲ್ಲಿ ಒಟ್ಟು 56 ಕರೆಗಳು ಸ್ವೀಕರಿಸಲ್ಪಟ್ಟಿದ್ದು, 83 ದೂರುಗಳು ದಾಖಲಾಗಿವೆ. ಕಳೆದ ಸೆಪ್ಟೆಂಬರ್ 26ರಿಂದ ಫೋನ್-ಇನ್ ಕಾರ್ಯಕ್ರಮ ಆರಂಭವಾದ ಬಳಿಕ ಇದುವರೆಗೆ ಒಟ್ಟು 1,537 ಕರೆಗಳು ಬಂದಿದ್ದು, 1,969 ದೂರುಗಳು ದಾಖಲಾಗಿವೆ. ಅವುಗಳಲ್ಲಿ 1,408 ಕುಂದುಕೊರತೆಗಳಿಗೆ ಪರಿಹಾರ ಒದಗಿಸಲಾಗಿದೆ. ಉಳಿದ ದೂರುಗಳ ಪರಿಹಾರ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ಶುಕ್ರವಾರ ನಡೆಯುವ ಈ ಫೋನ್-ಇನ್ ಕಾರ್ಯಕ್ರಮವು ನಾಗರಿಕರೊಂದಿಗೆ ನೇರ ಸಂಪರ್ಕ ಸಾಧಿಸಲು ಹಾಗೂ ಕುಂದುಕೊರತೆಗಳಿಗೆ ಶೀಘ್ರ ಸ್ಪಂದನೆ ನೀಡಲು ನೆರವಾಗುತ್ತಿದೆ ಎಂದು ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.