
ಬೆಂಗಳೂರು, 22 ಮೇ (ಹಿ.ಸ.) :
ಆ್ಯಂಕರ್ : ಹವಾಮಾನ ಬದಲಾವಣೆ ಹಾಗೂ ಅಂತರ್ಜಲದ ಅತಿಯಾದ ಬಳಕೆಯಿಂದ ಉಂಟಾಗಬಹುದಾದ ಜಲಕ್ಷಾಮವನ್ನು ತಡೆಗಟ್ಟಲು ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಎನ್ಸಿಇಆರ್ಟಿ ಪಠ್ಯಕ್ರಮದಲ್ಲಿ ‘ಅಂತರ್ಜಲ’ ಕುರಿತ ಪ್ರತ್ಯೇಕ ಅಧ್ಯಾಯವನ್ನು ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಪ್ರಸ್ತುತ ಎನ್ಸಿಇಆರ್ಟಿ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿನ ‘ಜಲ ಸಂಪನ್ಮೂಲಗಳು’ ಅಧ್ಯಾಯದಲ್ಲಿ ಮೇಲ್ಮೈ ಜಲಕ್ಕೆ ಮಾತ್ರ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಹೇಳಿದ್ದಾರೆ. ಆದರೆ ಭೂಮಿಯ ಮೇಲಿರುವ ಸಿಹಿನೀರಿನ ಬಹುಪಾಲು ಅಂತರ್ಜಲ ರೂಪದಲ್ಲಿದ್ದು, ದೇಶದ ಗೃಹಬಳಕೆ ಮತ್ತು ಕೃಷಿ ಕ್ಷೇತ್ರಗಳು ಬಹುತೇಕ ಅಂತರ್ಜಲದ ಮೇಲೆಯೇ ಅವಲಂಬಿತವಾಗಿವೆ ಎಂದು ವಿವರಿಸಿದ್ದಾರೆ.
ಪ್ರತಿ ವರ್ಷ ನೀರಿನ ಬಳಕೆ ಹೆಚ್ಚುತ್ತಿರುವುದರ ಜೊತೆಗೆ ಹವಾಮಾನ ಬದಲಾವಣೆಯಿಂದ ಮೇಲ್ಮೈ ಜಲಮೂಲಗಳ ಲಭ್ಯತೆ ಕಡಿಮೆಯಾಗುತ್ತಿದೆ. ಇದರ ಪರಿಣಾಮವಾಗಿ ಅಂತರ್ಜಲದ ಮೇಲಿನ ಅವಲಂಬನೆ ಹೆಚ್ಚುತ್ತಿದ್ದು, ಅತಿಬಳಕೆಯ ಮತ್ತು ಅಪಾಯಕಾರಿ ಮಟ್ಟದಲ್ಲಿರುವ ಅಂತರ್ಜಲ ಪ್ರದೇಶಗಳ ಸಂಖ್ಯೆ ಏರಿಕೆಯಾಗುತ್ತಿದೆ ಎಂದು ಅವರು ಎಚ್ಚರಿಸಿದ್ದಾರೆ.
ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿಯೂ ಅಂತರ್ಜಲ ಸಂರಕ್ಷಣೆಗೆ ಮಹತ್ವ ನೀಡಲಾಗಿದೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳ ಶಾಲಾ ಪಠ್ಯಕ್ರಮಗಳಲ್ಲಿ ಅಂತರ್ಜಲದ ಇಂಗುವಿಕೆ, ಹರಿವು, ಕಲುಷಿತಗೊಳ್ಳುವಿಕೆ ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡ ಪ್ರತ್ಯೇಕ ಅಧ್ಯಾಯಗಳಿವೆ. ಇದೇ ಮಾದರಿಯಲ್ಲಿ ಭಾರತದಲ್ಲೂ ವಿದ್ಯಾರ್ಥಿಗಳಿಗೆ ಅಂತರ್ಜಲದ ಮಹತ್ವ ಮತ್ತು ಸಂರಕ್ಷಣೆ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ಪತ್ರದಲ್ಲಿ ಮನವರಿಕೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ–2020 ಹಾಗೂ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಅಡಿಯಲ್ಲಿ 2027-28ನೇ ಸಾಲಿನ ಹೊಸ ಪಠ್ಯಪುಸ್ತಕಗಳನ್ನು ಎನ್ಸಿಇಆರ್ಟಿ ಸಿದ್ಧಪಡಿಸುತ್ತಿದೆ. ಈ ಪಠ್ಯಕ್ರಮದಲ್ಲಿ ಅಂತರ್ಜಲ ಕುರಿತ ಅಧ್ಯಾಯ ಸೇರಿಸಲು ರಾಜ್ಯ ಸರ್ಕಾರ ಮನವಿ ಮಾಡಿದೆ.
ಈ ಅಧ್ಯಾಯದಲ್ಲಿ ಮಳೆನೀರು ಕೊಯ್ಲು, ಕೃತಕ ಅಂತರ್ಜಲ ಮರುಪೂರಣ ತಂತ್ರಜ್ಞಾನ, ಪ್ರಕೃತಿ ಆಧಾರಿತ ಪರಿಹಾರಗಳು, ಅಂತರ್ಜಲ ನಕ್ಷೆ ಮತ್ತು ಮಾದರೀಕರಣ, ಐಒಟಿ ಹಾಗೂ ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನ ಬಳಕೆ ಸೇರಿದಂತೆ ವಿವಿಧ ವಿಷಯಗಳನ್ನು ಒಳಗೊಳ್ಳುವಂತೆ ಸೂಚಿಸಲಾಗಿದೆ. ಜೊತೆಗೆ ಕೇಂದ್ರ ಜಲಶಕ್ತಿ ಸಚಿವಾಲಯ, ಕೇಂದ್ರ ಅಂತರ್ಜಲ ಮಂಡಳಿ ಮತ್ತು ನೀತಿ ಆಯೋಗದ ಜಲ ಸಂರಕ್ಷಣಾ ಯೋಜನೆಗಳ ಕುರಿತ ಮಾಹಿತಿಯನ್ನೂ ಸೇರಿಸಲು ಸಲಹೆ ನೀಡಲಾಗಿದೆ.
“ಭವಿಷ್ಯದ ಜಲಕ್ಷಾಮವನ್ನು ಪರಿಣಾಮಕಾರಿಯಾಗಿ ಎದುರಿಸಲು ಕೇವಲ ಯೋಜನೆಗಳು ಸಾಕಾಗುವುದಿಲ್ಲ. ಮುಂದಿನ ಪೀಳಿಗೆಗೆ ಜಲ ಸಂರಕ್ಷಣೆಯ ಮಹತ್ವವನ್ನು ಶಾಲಾ ಹಂತದಲ್ಲೇ ತಿಳಿಸಿಕೊಡಬೇಕು. ಈ ನಿಟ್ಟಿನಲ್ಲಿ ಎನ್ಸಿಇಆರ್ಟಿ ಪಠ್ಯಕ್ರಮದಲ್ಲಿ ಅಂತರ್ಜಲ ಕುರಿತ ಪ್ರತ್ಯೇಕ ಅಧ್ಯಾಯ ಅಳವಡಿಸುವುದು ತುರ್ತು ಅಗತ್ಯವಾಗಿದೆ,” ಎಂದು ಸಚಿವ ಎನ್.ಎಸ್. ಭೋಸರಾಜು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.