
ಬೆಂಗಳೂರು, 22 ಮೇ (ಹಿ.ಸ.) :
ಆ್ಯಂಕರ್ : ಕರ್ನಾಟಕ ವಿಧಾನ ಸಭೆಯ ಪ್ರತಿ ಪಕ್ಷದ ನಾಯಕ ಆರ್. ಅಶೋಕ ಅವರು ತಮ್ಮ ಆದ್ಯತೆಯ ಸರ್ಕಾರಿ ವಸತಿ ಗೃಹವನ್ನು ತಕ್ಷಣ ಹಂಚಿಕೆ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ತಾವು ಪ್ರತಿಪಕ್ಷದ ನಾಯಕರಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ಸರ್ಕಾರಿ ವಸತಿ ಗೃಹ ಹಂಚಿಕೆ ಮಾಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮಗೆ ಆದ್ಯತೆಯ ಸರ್ಕಾರಿ ವಸತಿ ಗೃಹವನ್ನು ಹಂಚಿಕೆ ಮಾಡದ ಹಿನ್ನೆಲೆಯಲ್ಲಿ, 2026ರ ಏಪ್ರಿಲ್ ಮಾಹೆಯಿಂದ ಮನೆ ಬಾಡಿಗೆ ಭತ್ಯೆಯನ್ನು ಪಡೆಯದೆ ಪ್ರತಿಭಟನೆ ನಡೆಸುತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.
ತಮ್ಮ ಆದ್ಯತೆಯ ವಸತಿ ಗೃಹಗಳಾಗಿ ಕೆಳಕಂಡ ವಸತಿಗಳನ್ನು ಉಲ್ಲೇಖಿಸಿರುವ ಅವರು, ಅವುಗಳಲ್ಲಿ ಯಾವುದಾದರೂ ಒಂದನ್ನು “Designated Quarters” ಆಗಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಕುಮಾರ ಕೃಪ ಪೂರ್ವ, ಬೆಂಗಳೂರು, ರೇಸ್ ವ್ಯೂ ಕಾಟೇಜ್ ನಂ.01, ರೇಸ್ ಕೋರ್ಸ್ ರಸ್ತೆ, ಬೆಂಗಳೂರು,ರೇಸ್ ವ್ಯೂ ಕಾಟೇಜ್ ನಂ.02, ರೇಸ್ ಕೋರ್ಸ್ ರಸ್ತೆ, ಬೆಂಗಳೂರು
ಪ್ರತಿ ಪಕ್ಷದ ನಾಯಕರ ಮನವಿಗೆ ಸರ್ಕಾರ ಸ್ಪಂದಿಸದಿರುವುದು ಸರಿಯಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಆರ್. ಅಶೋಕ, ಈ ವಿಚಾರದಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.