





ಬಳ್ಳಾರಿ, 21 ಮೇ (ಹಿ.ಸ.) :
ಆ್ಯಂಕರ್ : ವಿಶ್ವವಿದ್ಯಾಲಯಗಳು ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡುವುದರ ಜೊತೆಯಲ್ಲಿ ಡಿಜಿಟಲ್ ಗ್ರಂಥಾಲಯಗಳನ್ನು ಹೊಂದಬೇಕು ಎಂದು ಜಿಲ್ಲಾಧಿಕಾರಿಗಳಾದ ಕೆ ನಾಗೇಂದ್ರ ಪ್ರಸಾದ್ ಅವರು ತಿಳಿಸಿದ್ದಾರೆ.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರೊ. ಸಿದ್ದು .ಪಿ ಆಲಗೂರ ಸಭಾಂಗಣದಲ್ಲಿ ಗುರುವಾರದಿಂದ ಪ್ರಾರಂಭವಾಗಿರುವ ಎರಡು ದಿನಗಳ `ವಿಜ್ಞಾನ ಪ್ರದರ್ಶನ-2026’ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಐ ಯುಗದಲ್ಲಿ ವಿಜ್ಞಾನವನ್ನು ಸ್ಥಳೀಯ ಭಾಷೆಯಲ್ಲಿ ಜನಸಾಮಾನ್ಯರಿಗೆ ತಲುಪುವ ಹಾಗೆ ಭಾಷಾಂತರಗೊಳಿಸುವ ಅಗತ್ಯವಿದೆ. ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನದ ಅವಶ್ಯಕತೆ ಇದೆ. ತಂತ್ರಜ್ಞಾನ ಬದಲಾದಂತೆ ಪ್ರಾದೇಶಿಕ ವಾತಾವರಣವೂ ಬದಲಾಗುತ್ತದೆ ಎನ್ನುವುದಕ್ಕೆ ನಮ್ಮ ಬಳ್ಳಾರಿಯೇ ಸ್ಪಷ್ಟ ನಿದರ್ಶನವಾಗಿದ್ದು, ಬಳ್ಳಾರಿಯು ಹಸಿರೀಕರಣಗೊಂಡಿರುವುದು ಇದಕ್ಕೆ ಸಾಕ್ಷಿ ಎಂದರು.
ಜಿಲ್ಲಾ ಪಂಚಾಯತ್ನ ಕಾರ್ಯನಿರ್ವಾಹಕ ಅಧಿಕಾರಿ ಮೊಹ್ಮದ್ ಹಾರಿಸ್ ಸುಮೈರ್ ಅವರು ಅತಿಥಿಗಳಾಗಿ, ವಿಜ್ಞಾನವು ಶೋಧನೆ ಮತ್ತು ಕ್ರಿಯಾತ್ಮಕ ವಿಚಾರಳಿಗೆ ವೇದಿಕೆಯಾಗಿದೆ. ವಿಜ್ಞಾನ ಬೆಳೆದಷ್ಟು ಸವಾಲುಗಳು ಸಾಕಷ್ಟು ಉದ್ಭವಿಸುತ್ತವೆ. ರಾಮನ್ ಪರಿಣಾಮವನ್ನು ಹಲವಾರು ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಬಳಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಸಂಶೋಧನಗಳಲ್ಲಿ ಎಲ್ಲರೂ ಹೆಚ್ಚಾಗಿ ಭಾಗಿಯಾಗಬೇಕು ಎಂದು ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎನ್.ಕೆ. ಲೋಕನಾಥ್ ಅವರು, ಪ್ರಸ್ತುತ ಸ್ಮಾರ್ಟ್ಫೋನ್ ಗೀಳಿಗಿಂತ ‘ಸ್ಮಾರ್ಟ್’ (ಸ್ಪೆಸಿಫಿಕ್, ಮೆಸರೇಬಲ್, ಅಚಿವೇಬಲ್, ರಿಲೆವೆಂಟ್, ಟೈಂಬಾಂಡ್) ಆಗಿ ಕಾರ್ಯನಿರ್ವಹಿಸಿದಲ್ಲಿ ಎಲ್ಲ ಕ್ಷೇತ್ರದ ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿ ಆಗಲಿದೆ ಎಂದರು.
ವಿಜ್ಞಾನವು ವಿಶ್ವದಾದ್ಯಂತ ವ್ಯಾಪಕವಾಗಿ ಹರಡಿದೆ. ವಿಜ್ಞಾನ ಆಧಾರಿತ ಪ್ರಯೋಗಗಳು ಮಾನವಿಯತೆಗೆ ಮಾರಕವಾಗಬಾರದು. ವಿದ್ಯಾರ್ಥಿಗಳು ತಮ್ಮಲ್ಲಿರುವ ನವೀನ ವಿಚಾರಧಾರೆಗಳನ್ನು ತಮ್ಮ ಸಂಶೋಧನೆಗಳಾಗಿ ಮಾರ್ಪಡಿಸಬೇಕು. ಈ ಮಾದರಿಯ ಮೇಳವು ವಿದ್ಯಾರ್ಥಿ ಹಾಗೂ ಶಿಕ್ಷಕರ ವೈಜ್ಞಾನಿಕ ಚಟುವಟಿಕೆಗಳನ್ನು ಅನಾವರಣಗೊಳಿಸುವ ಮೂಲಕ ಅವರಲ್ಲಿ ಹೊಸ ಆಸಕ್ತಿ, ಅನ್ವೇಷಣೆ ಹಾಗೂ ವಿಚಾರಗಳು ಆಳವಾಗಿ ಬೇರೂರುವಂತೆ ಮಾಡುತ್ತವೆ. ನೂತನ ಅನ್ವೇಷಣೆ, ಸಕಾರಾತ್ಮಕ ಚಿಂತನೆ ಮತ್ತು ಧನಾತ್ಮಕ ವಿಚಾರಗಳಿಗೆ ಮಾತ್ರ ವಿದ್ಯಾರ್ಥಿಗಳು ಗಮನ ಹರಿಸಬೇಕೆಂದು ಸಂದೇಶ ನೀಡಿದರು.
ವಿಎಸ್ಕೆಯು ಕುಲಪತಿಗಳಾದ ಪ್ರೊ. ಎಂ. ಮುನಿರಾಜು ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ವೈಜ್ಞಾನಿಕ ಮೇಳಗಳು ವಿದ್ಯಾರ್ಥಿಗಳಲ್ಲಿ ಕಲಿಕಾ ವಾತಾವರಣವನ್ನು ಉತ್ತೇಜಿಸುತ್ತವೆ. ಸಂಶೋಧಕರುಗಳು ಹೊಸ ಅನ್ವೇಷಣೆ ಹಾಗೂ ಜನಪರ ಅಭಿವೃದ್ಧಿ ಚಿಂತನೆಯುಕ್ತ ವೈಜ್ಞಾನಿಕ ವಿಚಾರಗಳನ್ನು ಹೆಚ್ಚಾಗಿ ಹೊರತರಬೇಕು ಎಂದರು.
ಅನ್ವಯಿಕ ವಿಜ್ಞಾನ ನಿಕಾಯದ ಡೀನರಾದ ಪ್ರೊ ಹನುಮೇಶ ವೈದ್ಯ ಅವರ ಮಾರ್ಗದರ್ಶನದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳು ನಿರ್ಮಿಸಿರುವ ವೆಬ್ಸೈಟ್ ಮಾದರಿ (ಎಐ ಇಂಟಿಗ್ರೇಟೆಡ್ ಡೈನಾಮಿಕ ಮಾಡೆಲ್), ಬೆಸ್ಟ್ ಆಫ್ ಬಳ್ಳಾರಿ ಹಾಗೂ ಆಸ್ಕ್ ವಿಎಸ್ಕೆಯು (ವಿಎಸ್ಕೆಯು ಚಾಟ್ ಜಿಪಿಟಿ) ಗಳನ್ನು ಗಣ್ಯರು ಅನಾವರಣಗೊಳಿಸಿದರು.
ವಿವಿಯ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಎನ್.ಎಂ. ಸಾಲಿ, ವಿತ್ತಾಧಿಕಾರಿಗಳಾದ ಸ್ಫೂರ್ತಿ ಕೆ.ಜಿ, ಶುದ್ಧ ವಿಜ್ಞಾನ ನಿಕಾಯದ ಡೀನರಾದ ಪ್ರೊ. ಉದಯ್ ಕುಮಾರ್ ಖಡ್ಕೆ, ಕಾರ್ಯಕ್ರಮದ ಸಹ ಸಂಚಾಲಕರಾದ ಡಾ. ಪಿ. ಶರತ್ ಕುಮಾರ ಅವರು ವೇದಿಕೆಯಲ್ಲಿದ್ದರು.
ಡಾ. ಸಿದ್ದೇಶ್ವರಿ ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಜೆ. ತಿಪ್ಪೇರುದ್ರಪ್ಪ ಅವರು ಸ್ವಾಗತಿಸಿದರು. ವಿವಿಯ ಕುಲಸಚಿವರಾದ ಪ್ರೊ. ವಿ. ಲೋಕೇಶ ಅವರು ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್