
ಧಾರವಾಡ, 21 ಮೇ (ಹಿ.ಸ.) :
ಆ್ಯಂಕರ್ : ಧಾರವಾಡ ಜಿಲ್ಲೆಯ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟ ಹಾಗೂ ಮೊಟ್ಟೆ ವಿತರಣೆಯಲ್ಲಿ ಯಾವುದೇ ವ್ಯತ್ಯಯವಾಗಬಾರದು. ಶಾಲೆಗಳು ಹಾಗೂ ವಸತಿ ನಿಲಯಗಳಿಗೆ ಅಗತ್ಯವಾದ ಗ್ಯಾಸ್ ಸಂಪರ್ಕಗಳನ್ನು ತಕ್ಷಣವೇ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೆಟ್ರೋಲ್ ಬಂಕ್ ಕಂಪನಿಗಳ ಪ್ರತಿನಿಧಿಗಳ ಮತ್ತು ಗ್ಯಾಸ್ ವಿತರಕರ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಭೆ ಜರುಗಿಸಿ, ಮಾತನಾಡಿದರು.
ಶಾಲೆಯಲ್ಲಿ ಮಕ್ಕಳಿಗೆ ಬೇಯಿಸಿದ ಮೊಟ್ಟೆ ನೀಡುವ ಯೋಜನೆ ಸಮರ್ಪಕವಾಗಿ ಜಾರಿಯಾಗಲು ಮೊಟ್ಟೆ ಕುದಿಸಲು ಗ್ಯಾಸ್ ಸಂಪರ್ಕ ಅತ್ಯಗತ್ಯವಾಗಿದ್ದು, ಸೋಮವಾರದೊಳಗೆ ಎಲ್ಲ ಶಾಲೆಗಳು ಮತ್ತು ಹಾಸ್ಟೆಲ್ಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸಲು ಅವರು ಸೂಚಿಸಿದರು.
ಇಂಡಿಯನ್ ಆಯಿಲ್ ಕಾರ್ಪೊರೇಶನ್, ಭಾರತ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳು ಈಗಾಗಲೇ ಎಷ್ಟು ಸಂಪರ್ಕಗಳನ್ನು ನೀಡಿವೆ ಎಂಬ ಕುರಿತು ಸೋಮವಾರದೊಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.
ಜಿಲ್ಲೆಯ ಎಲ್ಲಾ ಪೆಟ್ರೋಲ್ ಬಂಕ್ಗಳಲ್ಲಿ ಪ್ರತಿದಿನ ಲಭ್ಯವಿರುವ ಇಂಧನದ ಲಭ್ಯತೆ ಹಾಗೂ ಪ್ರಸ್ತುತ ದರದ ವಿವರವನ್ನು ಸಾರ್ವಜನಿಕರಿಗೆ ಎದ್ದು ಕಾಣಿಸುವಂತೆ ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಶಾಲಾ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ಯೋಜನೆ ಶಿಕ್ಷಣಾಧಿಕಾರಿ ರೂಪಾ ಬಿ. ಪೂರಮಕರ ಹಾಗೂ ಪೆಟ್ರೋಲ್ ಬಂಕ್ ಮತ್ತು ಗ್ಯಾಸ್ ಮಾಲೀಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.