ಕೃಷಿಯಲ್ಲಿ ತುರ್ತು ಪರಿಸ್ಥಿತಿ ಎದುರಿಸಲು ರೈತರಿಗೆ ಕೃಷಿ ಇಲಾಖೆ ಮಾರ್ಗಸೂಚಿ
ಗದಗ, 21 ಮೇ (ಹಿ.ಸ.) : ಆ್ಯಂಕರ್ : ಮುಂಗಾರು ಹಂಗಾಮು 2026ರಲ್ಲಿ ಸಂಭವಿಸಬಹುದಾದ ಮಳೆ ಕೊರತೆ, ತಡವಾದ ಮಳೆ ಹಾಗೂ ಮಧ್ಯಂತರ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಗದಗ ಜಿಲ್ಲೆಯ ರೈತರು ಮುಂಚಿತ ಸಿದ್ಧತೆ ಕೈಗೊಳ್ಳಬೇಕೆಂದು ಕೃಷಿ ಇಲಾಖೆ ಸಲಹೆ ನೀಡಿದೆ. ಎಲ್ ನಿನೋ ಪರಿಣಾಮದಿಂದ ಈ ಬಾರಿ ಮುಂಗಾರು
ಫೋಟೋ


ಗದಗ, 21 ಮೇ (ಹಿ.ಸ.) :

ಆ್ಯಂಕರ್ : ಮುಂಗಾರು ಹಂಗಾಮು 2026ರಲ್ಲಿ ಸಂಭವಿಸಬಹುದಾದ ಮಳೆ ಕೊರತೆ, ತಡವಾದ ಮಳೆ ಹಾಗೂ ಮಧ್ಯಂತರ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಗದಗ ಜಿಲ್ಲೆಯ ರೈತರು ಮುಂಚಿತ ಸಿದ್ಧತೆ ಕೈಗೊಳ್ಳಬೇಕೆಂದು ಕೃಷಿ ಇಲಾಖೆ ಸಲಹೆ ನೀಡಿದೆ. ಎಲ್ ನಿನೋ ಪರಿಣಾಮದಿಂದ ಈ ಬಾರಿ ಮುಂಗಾರು ಮಳೆಯ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಲ್ಲಿ ವೈಜ್ಞಾನಿಕ ಕ್ರಮಗಳನ್ನು ಅನುಸರಿಸುವುದು ಅಗತ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗದಗ ಜಿಲ್ಲೆಯಲ್ಲಿ ಮೇ 19ರವರೆಗೆ ಪೂರ್ವ ಮುಂಗಾರು ವಾಡಿಕೆಯಂತೆ 72.50 ಮಿ.ಮೀ. ಮಳೆಯಾಗಬೇಕಿದ್ದರೂ, ಈಗಾಗಲೇ 105.70 ಮಿ.ಮೀ. ಮಳೆಯಾಗಿದ್ದು, ಇದು ವಾಡಿಕೆಗಿಂತ ಶೇ.46ರಷ್ಟು ಅಧಿಕವಾಗಿದೆ. ಆದರೂ ಮುಂದಿನ ದಿನಗಳಲ್ಲಿ ಮಳೆಯ ಅನಿಶ್ಚಿತತೆ ಎದುರಾಗುವ ಸಾಧ್ಯತೆ ಇರುವುದರಿಂದ ರೈತರು ಎಚ್ಚರಿಕೆಯಿಂದ ಕೃಷಿ ಯೋಜನೆ ರೂಪಿಸಿಕೊಳ್ಳಬೇಕಾಗಿದೆ.

ಈ ಕುರಿತು ದಿ.14ರಂದು ಕೃಷಿ ಆಯುಕ್ತರ ಅಧ್ಯಕ್ಷತೆಯಲ್ಲಿ ವಿಡಿಯೋ ಸಂವಾದದ ಮೂಲಕ ಸಮನ್ವಯ ಸಭೆ ನಡೆಯಿತು. ಸಭೆಯಲ್ಲಿ ಭಾರತದ ಮೇಲೆ ಎಲ್ ನಿನೋ ಪರಿಣಾಮದಿಂದ ಮುಂಗಾರು ಮಳೆಯ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗಿ, ಕೆಲವು ಭಾಗಗಳಲ್ಲಿ ಮಳೆಯ ಕೊರತೆ ಉಂಟಾಗುವ ಸಾಧ್ಯತೆ ಬಗ್ಗೆ ಚರ್ಚಿಸಲಾಯಿತು.

ಹೈದರಾಬಾದ್ನ ಕೇಂದ್ರೀಯ ಒಣ ಬೇಸಾಯ ಸಂಶೋಧನಾ ಸಂಸ್ಥೆ ಆಯೋಜಿಸಿದ್ದ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದ ವಿಜ್ಞಾನಿಗಳು, ಗದಗ ಜಿಲ್ಲೆಯಲ್ಲಿ ಮುಂಗಾರು ಮಾರುತ ಮಳೆಯು ತಡವಾಗಿ ಆರಂಭವಾಗಬಹುದು ಅಥವಾ ಮಧ್ಯಂತರ ಬರ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ವಿಶೇಷವಾಗಿ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಶೇ.50ರಷ್ಟು ತೇವಾಂಶದ ಕೊರತೆ ಉಂಟಾಗುವ ಸಾಧ್ಯತೆ ಇರುವುದರಿಂದ ಬೆಳೆ ಉತ್ಪಾದನೆ ಕುಸಿತವಾಗುವ ಆತಂಕವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಣ್ಣಿನ ಪರೀಕ್ಷೆಗೆ ಆದ್ಯತೆ

ಬೇಸಾಯ ಆರಂಭಿಸುವ ಮುನ್ನ ರೈತರು ತಮ್ಮ ಜಮೀನಿನ ಮಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಣ್ಣಿನ ವಿಶ್ಲೇಷಣೆಯ ವರದಿ ಹಾಗೂ ಬೆಳೆಯ ಅವಶ್ಯಕತೆಗೆ ಅನುಗುಣವಾಗಿ ಪೋಷಕಾಂಶಗಳನ್ನು ಪೂರೈಸಬೇಕು ಎಂದು ಇಲಾಖೆ ಸಲಹೆ ನೀಡಿದೆ. ಗದಗ ಜಿಲ್ಲೆಯಲ್ಲಿ ಪೂರ್ವ ಮುಂಗಾರಿನಲ್ಲಿ ಹೆಚ್ಚಿನ ಪ್ರದೇಶದಲ್ಲಿ ಬೆಳೆಯುವ ಹೆಸರು ಬೆಳೆಗೆ ಸೂಕ್ತವಾಗಿ ಭೂಮಿಯನ್ನು ಸಿದ್ಧಪಡಿಸಿಕೊಳ್ಳುವಂತೆ ರೈತರಿಗೆ ಸೂಚಿಸಲಾಗಿದೆ.

ಆರಂಭಿಕ ಬರ ಪರಿಸ್ಥಿತಿ ಎದುರಿಸಲು ಕ್ರಮಗಳು

ಬಿತ್ತನೆ ನಂತರ ಅಥವಾ ಮೊಳಕೆ ಹಂತದಲ್ಲಿ ಮಳೆಯ ಕೊರತೆ ಕಂಡುಬಂದರೆ ಕಡಿಮೆ ಅವಧಿಯ ಹಾಗೂ ಬರ ತಾಳುವ ತಳಿಗಳ ಆಯ್ಕೆ ಮಾಡಿಕೊಳ್ಳಬೇಕು. ಅಂತರ ಬೆಳೆ ಪದ್ಧತಿ ಅಳವಡಿಸಿಕೊಂಡು, ನೆಲದ ತೇವಾಂಶ ಉಳಿಸಿಕೊಳ್ಳಲು ಮಲ್ಚಿಂಗ್ ಅಥವಾ ನೆಲ ಹಾಸುವ ವಿಧಾನವನ್ನು ಅನುಸರಿಸಬೇಕು.

ತಡವಾಗಿ ಬಿತ್ತನೆ ಮಾಡುವ ಸಂದರ್ಭಗಳಲ್ಲಿ ಪರ್ಯಾಯ ಬೆಳೆ ಯೋಜನೆ ರೂಪಿಸಿಕೊಳ್ಳುವುದು ಮುಖ್ಯವಾಗಿದೆ. ಜೊತೆಗೆ ಮಳೆ ನೀರನ್ನು ಸಂಗ್ರಹಿಸಿ ಬಳಸುವ ವ್ಯವಸ್ಥೆ ಮಾಡಿಕೊಳ್ಳಬೇಕು. ಬೆಳೆಗಳ ಸಾಂದ್ರತೆಯನ್ನು ಕಡಿಮೆ ಮಾಡಲು 30 ರಿಂದ 35 ಶೇಕಡಾ ಕೈಗೊಳ್ಳುವುದು ಸೂಕ್ತ ಎಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

ಮರುಬಿತ್ತನೆ ಅಗತ್ಯವಾದಲ್ಲಿ ವಿಳಂಬ ಮಾಡದೆ ತಕ್ಷಣ ಕೈಗೊಳ್ಳಬೇಕು. ಕಳೆ ನಿಯಂತ್ರಣದ ಮೂಲಕ ಜಮೀನಿನಲ್ಲಿರುವ ತೇವಾಂಶವನ್ನು ಸಂರಕ್ಷಿಸಬೇಕು. ತೇವಾಂಶ ಕೊರತೆ ಇರುವಾಗ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಬಳಕೆ ಮಾಡಬಾರದು. ಮಳೆ ಬಂದ ಬಳಿಕ ಬೆಳೆ ಪುನಶ್ಚೇತನಕ್ಕಾಗಿ ನ್ಯಾನೋ ಯೂರಿಯಾ ಸಿಂಪಡಣೆ ಕೈಗೊಳ್ಳುವುದು ಉತ್ತಮ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಧ್ಯಂತರ ಬರದಲ್ಲಿ ವಿಶೇಷ ನಿರ್ವಹಣೆ ಅಗತ್ಯ

ಹಂಗಾಮಿನ ಮಧ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾದರೆ ರೈತರು ಅಂತರ್ ಬೇಸಾಯ ಕ್ರಮವನ್ನು ಪುನರಾವರ್ತಿಸಬೇಕು. ಪ್ರತಿ ಮೂರನೇ ಸಾಲನ್ನು ತೆಗೆದುಹಾಕುವ ಮೂಲಕ ಬೆಳೆಗಳ ಮೇಲಿನ ತೇವಾಂಶ ಒತ್ತಡ ಕಡಿಮೆ ಮಾಡಬಹುದು.

ಈ ಸಂದರ್ಭದಲ್ಲಿ 0.5 ಶೇಕಡಾ ಪೊಟ್ಯಾಶಿಯಂ ನೈಟ್ರೇಟ್, 0.5 ಶೇಕಡಾ 19:19:19 ರಸಗೊಬ್ಬರ, 5 ಶೇಕಡಾ ಜೀವಾಮೃತ ಅಥವಾ 5 ಶೇಕಡಾ ವರ್ಮಿವಾಶ್ ಸಿಂಪಡಣೆ ಕೈಗೊಳ್ಳಲು ಸಲಹೆ ನೀಡಲಾಗಿದೆ. ತೇವಾಂಶ ನಷ್ಟ ಕಡಿಮೆ ಮಾಡಲು 5 ಶೇಕಡಾ ಕೆಯೋಲಿನ್ ಸಿಂಪಡಣೆಯೂ ಪರಿಣಾಮಕಾರಿ ಕ್ರಮವಾಗಿದೆ.

ನೀರು ಲಭ್ಯವಿರುವ ರೈತರು ಹನಿ ಅಥವಾ ತುಂತುರು ಪದ್ಧತಿಯ ಮೂಲಕ ಜೀವರಕ್ಷಕ ನೀರಾವರಿ ಕೈಗೊಳ್ಳಬೇಕು. ಲಭ್ಯವಿರುವ ನೀರನ್ನು ಪ್ರಾಥಮಿಕ ಬೆಳೆಗಳಿಗೆ ಮಾತ್ರ ಬಳಸುವಂತೆ ತಜ್ಞರು ಸೂಚಿಸಿದ್ದಾರೆ.

ಬೆಳೆ ಕಟಾವು ಮತ್ತು ಪರ್ಯಾಯ ಬೆಳೆಗಳತ್ತ ಗಮನ ಬೆಳೆಗಳಲ್ಲಿ ಫಿಸಿಯೋಲಾಜಿಕಲ್ ಮ್ಯಾಚುರಿಟಿ ಕಂಡುಬಂದ ತಕ್ಷಣ ಕಟಾವು ಮಾಡಬೇಕು. ಇದರಿಂದ ಉಳಿದ ತೇವಾಂಶವನ್ನು ಮುಂದಿನ ಬೆಳೆಗಾಗಿ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಮಳೆ ಪುನಃ ಆರಂಭವಾದ ಬಳಿಕ ಹುರುಳಿಕಾಳು, ಅಲಸಂದೆ ಅಥವಾ ದ್ವಿ-ಉದ್ದೇಶದ ಮೇವಿನ ಬೆಳೆಗಳನ್ನು ಬೆಳೆಯುವಂತೆ ಸಲಹೆ ನೀಡಲಾಗಿದೆ.

ಜಿಲ್ಲೆಯ ರೈತರು ಕಡಿಮೆ ಅವಧಿಯ, ಬರ ತಾಳುವ ತಳಿಗಳ ಆಯ್ಕೆ, ಅಂತರ ಬೆಳೆ ಪದ್ಧತಿ, ಮಲ್ಚಿಂಗ್, ಮಳೆ ನೀರು ಸಂಗ್ರಹಣೆ ಹಾಗೂ ಸಮರ್ಪಕ ಗೊಬ್ಬರ ಬಳಕೆ ಸೇರಿದಂತೆ ವೈಜ್ಞಾನಿಕ ಕೃಷಿ ಕ್ರಮಗಳನ್ನು ಅಳವಡಿಸಿಕೊಂಡರೆ ಸಂಭವನೀಯ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂಗಾರು ಹಂಗಾಮು ಆರಂಭಕ್ಕೂ ಮುನ್ನ ರೈತರು ಕೃಷಿ ಇಲಾಖೆಯ ಸಲಹೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಬೆಳೆ ನಷ್ಟವನ್ನು ತಗ್ಗಿಸಿ, ಉತ್ಪಾದನೆಯನ್ನು ಕಾಪಾಡಿಕೊಳ್ಳಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande