
ಬೆಂಗಳೂರು, 02 ಮೇ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಸೌಧದಲ್ಲಿ ಎಲ್ಲ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸಭೆ ನಡೆಸಿ, ಆಡಳಿತದ ಕುರಿತು ಮಹತ್ವದ ಸೂಚನೆಗಳನ್ನು ನೀಡಿದರು.
ಸಂವಿಧಾನದ ಆಶಯಗಳ ಪ್ರಕಾರ ಕಾರ್ಯನಿರ್ವಹಿಸುವುದು ಅಧಿಕಾರಿಗಳ ಪ್ರಮುಖ ಕರ್ತವ್ಯ ಎಂದು ಒತ್ತಿಹೇಳಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರ 1949ರ ನವೆಂಬರ್ 25ರ ಭಾಷಣವನ್ನು ಉಲ್ಲೇಖಿಸಿ, “ರಾಜಕೀಯ ಪ್ರಜಾಪ್ರಭುತ್ವವು ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಯ ತಳಹದಿಯ ಮೇಲೆ ನಿಂತಿದೆ” ಎಂಬ ತತ್ವವನ್ನು ಸ್ಮರಿಸಿದರು.
ಅಧಿಕಾರಿಗಳು ನಿರ್ಭಯವಾಗಿ ಹಾಗೂ ಸ್ವತಂತ್ರವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು ಎಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮಾತುಗಳನ್ನು ಉಲ್ಲೇಖಿಸಿ, ಸತ್ಯ ಹೇಳುವುದರಲ್ಲಿ ಹಿಂಜರಿಯಬಾರದು ಎಂದು ಸೂಚಿಸಿದರು.
ಪ್ರಮುಖ ಸೂಚನೆಗಳು:
ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಬಾರದು; ತೀರ್ಮಾನಗಳು ಸದಾ ಜನಪರವಾಗಿರಬೇಕು.
ಬಜೆಟ್ ಘೋಷಣೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು. ಕಳೆದ ವರ್ಷದ 15 ಘೋಷಣೆಗಳು ಇನ್ನೂ ಜಾರಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2026-27ರ ಬಜೆಟ್ನ 565 ಘೋಷಣೆಗಳನ್ನು ಇದೇ ವರ್ಷ ಜಾರಿಗೊಳಿಸುವಂತೆ ಗಡುವು ನಿಗದಿ ಮಾಡಿದರು. ಮೇ ತಿಂಗಳೊಳಗೆ ಎಲ್ಲಾ ಸರ್ಕಾರಿ ಆದೇಶಗಳನ್ನು ಹೊರಡಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜನಸ್ಪಂದನ ಹಾಗೂ IPGRS ಅಡಿಯಲ್ಲಿ ಬಂದ ಅರ್ಜಿಗಳನ್ನು ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡುವಂತೆ ಎಚ್ಚರಿಕೆ ನೀಡಿದರು.
24,300 ಹುದ್ದೆಗಳ ಭರ್ತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು; ಕಲ್ಯಾಣ ಕರ್ನಾಟಕ ಪ್ರದೇಶದ ಬಾಕಿ ನೇಮಕಾತಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು.
ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನವನ್ನು ನಿಗದಿತ ಅವಧಿಯಲ್ಲಿ ಖರ್ಚು ಮಾಡಬೇಕು.
ಎಸ್ಸಿ/ಎಸ್ಟಿ ಗುತ್ತಿಗೆದಾರರಿಗೆ ಮೀಸಲಾತಿ ತಪ್ಪಿಸಲು ಪ್ಯಾಕೇಜ್ ಮಾಡುವುದು ನಡೆಯಬಾರದು.
ಮಳೆಯ ಕೊರತೆ ಸಾಧ್ಯತೆ ಹಿನ್ನೆಲೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಜಿಲ್ಲಾಮಟ್ಟದಲ್ಲಿ ನಿರಂತರ ನಿಗಾ ವಹಿಸಬೇಕು.
“ಅಧಿಕಾರಿಗಳು ರಾಜಕಾರಣಿಗಳ ಓಲೈಕೆ ಮಾಡಬಾರದು; ಕಾನೂನಿನ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕು” ಎಂದು ಅಂಬೇಡ್ಕರ್ ಅವರ ಎಚ್ಚರಿಕೆಯನ್ನು ಉಲ್ಲೇಖಿಸಿದ ಸಿಎಂ, ಆಡಳಿತಕ್ಕೆ ಇನ್ನಷ್ಟು ಚುರುಕು ತರಲು ಸೂಚಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa