ಬಾರ್ಗಿ ಅಣೆಕಟ್ಟು ದುರಂತ ; ಕಾಣೆಯಾದ 4 ಜನರಿಗಾಗಿ ತೀವ್ರ ಶೋಧ, ಸೇನೆಯ ಸಹಾಯ ಕೋರಿಕೆ
ಜಬಲ್ಪುರ್, 02 ಮೇ (ಹಿ.ಸ.) : ಆ್ಯಂಕರ್ : ಮಧ್ಯ ಪ್ರದೇಶದ ಬಾರ್ಗಿ ಅಣೆಕಟ್ಟು ದುರಂತದಲ್ಲಿ ಕಾಣೆಯಾದ ನಾಲ್ವರನ್ನು ಪತ್ತೆ ಹಚ್ಚಲು ಶೋಧ ಕಾರ್ಯಾಚರಣೆ ಶನಿವಾರವೂ ಮುಂದುವರಿದಿದೆ. ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ತಂಡಗಳ ಜೊತೆಗೆ ಸೇನೆಯ ಸಹಾಯವೂ ಪಡೆಯಲಾಗಿದೆ. ಆದಾಗ್ಯೂ, ಮಧ್ಯಾಹ್ನದವರೆಗೆ ಯಾವುದೇ ಮಹ
Search


ಜಬಲ್ಪುರ್, 02 ಮೇ (ಹಿ.ಸ.) :

ಆ್ಯಂಕರ್ : ಮಧ್ಯ ಪ್ರದೇಶದ ಬಾರ್ಗಿ ಅಣೆಕಟ್ಟು ದುರಂತದಲ್ಲಿ ಕಾಣೆಯಾದ ನಾಲ್ವರನ್ನು ಪತ್ತೆ ಹಚ್ಚಲು ಶೋಧ ಕಾರ್ಯಾಚರಣೆ ಶನಿವಾರವೂ ಮುಂದುವರಿದಿದೆ. ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ತಂಡಗಳ ಜೊತೆಗೆ ಸೇನೆಯ ಸಹಾಯವೂ ಪಡೆಯಲಾಗಿದೆ. ಆದಾಗ್ಯೂ, ಮಧ್ಯಾಹ್ನದವರೆಗೆ ಯಾವುದೇ ಮಹತ್ವದ ಸುಳಿವು ದೊರಕಿಲ್ಲ.

ಭಾರಿ ಗಾಳಿ ಹಾಗೂ ಅಣೆಕಟ್ಟಿನಲ್ಲಿ ಉಂಟಾಗುತ್ತಿರುವ ಅಲೆಗಳ ಪರಿಣಾಮ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯಾಗುತ್ತಿದೆ. ಪೊಲೀಸ್ ಹಾಗೂ ಆಡಳಿತಾಧಿಕಾರಿಗಳು ಸ್ಥಳದಲ್ಲೇ ತಂಗಿ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಅಪಘಾತ ಸಂಭವಿಸಿ 40 ಗಂಟೆಗಳಿಗೂ ಹೆಚ್ಚು ಸಮಯ ಕಳೆದರೂ ಮೂವರು ಮಕ್ಕಳು ಸೇರಿ ನಾಲ್ವರು ಇನ್ನೂ ಪತ್ತೆಯಾಗಿಲ್ಲ. ಶನಿವಾರ ಬೆಳಗ್ಗೆ 7 ಗಂಟೆಯಿಂದ ಪುನಃ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಸ್ಥಳೀಯ ಸಿಎಸ್ಪಿ ಅಂಜುಲ್ ಅಯಾಂಕ್ ಮಿಶ್ರಾ ತಿಳಿಸಿದ್ದಾರೆ.

ಗುರುವಾರ ಸಂಜೆ ಉಂಟಾದ ಚಂಡಮಾರುತದ ಪರಿಣಾಮವಾಗಿ ನರ್ಮದಾ ನದಿ ಮೇಲಿನ ಬಾರ್ಗಿ ಅಣೆಕಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಕ್ರೂಸ್ ಹಡಗು ಮುಳುಗಿತ್ತು. ಹಡಗಿನಲ್ಲಿ 45ಕ್ಕೂ ಹೆಚ್ಚು ಪ್ರವಾಸಿಗರು ಇದ್ದರು. ಶುಕ್ರವಾರದವರೆಗೆ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ 28 ಜನರನ್ನು ರಕ್ಷಿಸಲಾಗಿದ್ದು, ಒಂಬತ್ತು ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಮೃತರಲ್ಲಿ ಜಬಲ್ಪುರ, ದೆಹಲಿ ಮತ್ತು ತಮಿಳುನಾಡಿನ ನಿವಾಸಿಗಳು ಸೇರಿದ್ದಾರೆ. ಇನ್ನೂ ಮೂವರು ಮಕ್ಕಳು ಸೇರಿ ನಾಲ್ವರು ನಾಪತ್ತೆಯಾಗಿರುವುದು ಆತಂಕ ಹೆಚ್ಚಿಸಿದೆ. ಶುಕ್ರವಾರ ಸಂಜೆ ಮಳೆ ಮತ್ತು ಕೆಟ್ಟ ಹವಾಮಾನದಿಂದಾಗಿ ಕಾರ್ಯಾಚರಣೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು.

ಇದರ ನಡುವೆ, ಮಧ್ಯ ಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಘಟನೆಗೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಂಡಿದ್ದಾರೆ. ನಿರ್ಲಕ್ಷ್ಯ ತೋರಿದ ಕ್ರೂಸ್ ಸಿಬ್ಬಂದಿಯನ್ನು ವಜಾಗೊಳಿಸಲಾಗಿದ್ದು, ಸಂಬಂಧಿತ ಅಧಿಕಾರಿಗಳ ವಿರುದ್ಧ ಅಮಾನತು ಕ್ರಮ ಕೈಗೊಳ್ಳಲಾಗಿದೆ.

ಘಟನೆಯ ಸಂಪೂರ್ಣ ತನಿಖೆಗಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದ್ದು, ಅಪಘಾತದ ಕಾರಣಗಳು, ಸುರಕ್ಷತಾ ನಿಯಮಗಳ ಪಾಲನೆ ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟುವ ಕ್ರಮಗಳನ್ನು ಸಮಗ್ರವಾಗಿ ಪರಿಶೀಲಿಸಲಾಗುತ್ತದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande