
ಬೆಂಗಳೂರು, 02 ಮೇ (ಹಿ.ಸ.) :
ಆ್ಯಂಕರ್ : ಎಲ್ ಪಿ ಜಿ ಬೆಲೆ ಏರಿಸುವುದು ಕಂಪನಿಗಳೇ ಹೊರತು ಕೇಂದ್ರ ಸರ್ಕಾರವಲ್ಲ ಎನ್ನುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ ಆಡಳಿತದ ಅಜ್ಞಾನವೋ ಅಥವಾ ಜನರನ್ನು ಮೂರ್ಖರನ್ನಾಗಿಸುವ ವ್ಯರ್ಥ ಪ್ರಯತ್ನವೋ ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ ಪ್ರಶ್ನಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ದೇಶದ ಬಡ-ಮಧ್ಯಮ ವರ್ಗದ ಜನರ ಬದುಕು ಬೆಂಕಿಯಲ್ಲಿ ಕರಗುತ್ತಿದೆ. ಬೆಲೆ ಏರಿಕೆಯ ಬಿಸಿ ಬಡ ಜನರ ದೈನಂದಿನ ಜೀವನದ ಮೇಲೆ ಬರೆ ಎಳೆಯುತ್ತಿದೆ. ಗ್ಯಾಸ್ ಬೆಲೆ ಏರಿಕೆಯಿಂದ ಕುಟುಂಬಗಳೇ ನಲುಗಿ ಹೋಗುತ್ತಿವೆ, ಹೋಟೆಲ್ಗಳಲ್ಲಿ ಊಟದ ಬೆಲೆ ಗಗನಕ್ಕೇರುವ ಪರಿಸ್ಥಿತಿ ಎದುರಾಗಿದೆ. ಇದು ಕೇವಲ ಕೇಂದ್ರ ಸರ್ಕಾರದ ಆರ್ಥಿಕ ದಿವಾಳಿತನ ಮಾತ್ರವಲ್ಲ, ಜನರ ದಿನನಿತ್ಯದ ಬದುಕಿನ ಮೇಲೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಡೆಸುತ್ತಿರುವ ನೇರ ದಾಳಿ ಎಂದಿದ್ದಾರೆ.
ಜೋಶಿ ಅವರೇ ಯಾವ ಕಂಪನಿಗಳು ಗ್ಯಾಸ್ ಸಿಲೆಂಡೆರ್ ಬೆಲೆ ಏರಿಸಿವೆ ಅಂತ ಸ್ಪಷ್ಟಪಡಿಸುತ್ತೀರಾ? ಇಂಡಿಯನ್ ಆಯಿಲ್ , ಬಿಪಿಸಿಎಲ್ , ಎಚ್ಪಿಸಿಎಲ್ ಇವೆಲ್ಲವೂ ಸರ್ಕಾರದ ನಿಯಂತ್ರಣದಲ್ಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಈ ಕಂಪನಿಗಳ ಮಂಡಳಿ ನೇಮಕಾತಿ, ನೀತಿ ಮಾರ್ಗದರ್ಶನ — ಇವೆಲ್ಲದರ ಮೇಲೆ ಸರ್ಕಾರದ ಹಿಡಿತ ಇಲ್ಲವೇ?
ಎಲ್ ಪಿ ಜಿ ದರದಲ್ಲಿ ಎಕ್ಸೈಸ್ ಡ್ಯೂಟಿ, ಸಬ್ಸಿಡಿ ಕಡಿತ — ಇವೆಲ್ಲವೂ ಕೇಂದ್ರದ ನಿರ್ಧಾರಗಳಲ್ಲವೇ?
ಸರ್ಕಾರಕ್ಕೆ ಅಧಿಕಾರ ಇಲ್ಲ ಎಂದಾದರೆ, ಈ ದೇಶದ ಆಡಳಿತ ಯಾರ ಕೈಯಲ್ಲಿದೆ? ನರೇಂದ್ರ ಮೋದಿಯ ಸ್ನೇಹಿತರಾಗಿರುವ ಅದಾನಿ ಅಂಬಾನಿಗಳ ಪೆಟ್ರೋಲ್ ಕಂಪನಿಗಳು ಬೆಲೆ ಏರಿಕೆಯನ್ನು ನಿರ್ಧರಿಸುತ್ತಿವೆಯೇ? ಅಥವಾ ಇಡೀ ದೇಶದ ಆಯಿಲ್ ಸಂಸ್ಥೆಗಳನ್ನೇ ಕಾರ್ಪೋರೇಟ್ ಕಂಪನಿಗಳಿಗೆ ಮಾರಿದ್ದೀರಾ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೈಸೆಗಳ ಲೆಕ್ಕದಲ್ಲಿ ಗ್ಯಾಸ್ ಸಿಲೆಂಡರ್ ಬೆಲೆ ಏರಿಕೆಯಾಗುತ್ತಿತ್ತು, ನರೇಂದ್ರ ಮೋದಿ ಕಾಲದಲ್ಲಿ ಸಾವಿರ ರೂಗಳ ಲೆಕ್ಕದಲ್ಲಿ ಏರಿಕೆಯಾಗುತ್ತಿದೆ. ಇದೇ ಅಲ್ಲವೇ ಬಿಜೆಪಿ ಸರ್ಕಾರದ ಮಾಸ್ಟರ್ ಸ್ಟ್ರೋಕ್.. ಪೆಟ್ರೋಲ್-ಡಿಸೇಲ್ ಬೆಲೆ ನೂರರ ಗಡಿ ದಾಟಿದೆ, ಗ್ಯಾಸ್ ಸಿಲಿಂಡೆರ್ ಬೆಲೆ ಮೂರು ಸಾವಿರ ದಾಟಿದೆ, ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ನೂರಕ್ಕೆ ಕುಸಿದಿದೆ.
ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿಯ ಮಾಸ್ಟರ್ ಸ್ಟ್ರೋಕ್ ಗಳು ಒಂದಾ? ಎರಡಾ? ಇದು ಸ್ಯಾಂಪಲ್ ಅಷ್ಟೇ ಪಿಚ್ಚರ್ ಅಭಿ ಬಾಕಿ ಹೈ..! ಪಂಚ ರಾಜ್ಯಗಳ ಚುನಾವಣೆ ಮುಗಿದ ಕೂಡಲೇ ಭಾರಿ ಬೆಲೆ ಏರಿಕೆಯ ಎಚ್ಚರಿಕೆಯನ್ನು ಲೋಸಕಭೆಯ ಪ್ರತಿಪಕ್ಷ ನಾಯಕರಾದ ರಾಹುಲ್ ಗಾಂಧಿಯವರು ಎಚ್ಚರಿಸಿದ್ದರು. ಹಲವಾರು ಬಾರಿ ದೇಶ ಎದುರಿಸಬಹುದಾದ ಸವಾಲುಗಳಗಳ ಬಗ್ಗೆ ಹಾಗೂ ಬೆಲೆ ಏರಿಕೆ ಬಿಸಿ ಭಾರಿ ಪ್ರಮಾಣದಲ್ಲಿ ತಟ್ಟಲಿದೆ ಎಂದು ಎಚ್ಚರಿಸುತ್ತಲೇ ಇದ್ದಾರೆ. ಆದರೆ ಕುಹುಕ,ವ್ಯಂಗ್ಯ ಮಾಡುವ ಬಿಜೆಪಿಯ ಭಕ್ತರು ಹಾಗೂ ಪ್ರಧಾನಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲೇ ಇಲ್ಲ. ಅದರ ಪರಿಣಾಮವಾಗಿ ಇಂದು ದೇಶ ತತ್ತರಿಸುತ್ತಿದೆ. ಜನರ ಬದುಕು ಕುಸಿಯುತ್ತಿರುವಾಗ, ಹೊಣೆಗೇಡಿತನದ ಹೇಳಿಕೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಜನರು ನೋಡುತ್ತಿದ್ದಾರೆ, ನೆನಪಿಟ್ಟುಕೊಳ್ಳುತ್ತಿದ್ದಾರೆ ಎಂದಿದ್ದಾರೆ
ಹಿಂದೂಸ್ತಾನ್ ಸಮಾಚಾರ್ / Rakesh Mahadevappa