ಪ್ರಧಾನಿ ನರೇಂದ್ರ ಮೋದಿ ಅವರ ಐದು ರಾಷ್ಟ್ರಗಳ ಪ್ರವಾಸ ಆರಂಭ
ನಾನಾ
Pm


ನವದೆಹಲಿ, 15 ಮೇ (ಹಿ.ಸ.) :

ಆ್ಯಂಕರ್ : ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯುನೈಟೆಡ್ ಅರಬ್ ಎಮಿರೇಟ್ಸ್, ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಹಾಗೂ ಇಟಲಿ ಸೇರಿದಂತೆ ಐದು ರಾಷ್ಟ್ರಗಳ ಮಹತ್ವದ ವಿದೇಶಿ ಪ್ರವಾಸವನ್ನು ಇಂದಿನಿಂದ ಆರಂಭಿಸಿದ್ದಾರೆ.

ಮುಂದಿನ ಆರು ದಿನಗಳ ಅವಧಿಯಲ್ಲಿ ನಾನಾ ರಾಷ್ಟ್ರಗಳ ನಾಯಕರೊಂದಿಗೆ ಉನ್ನತ ಮಟ್ಟದ ಸಭೆಗಳು ಹಾಗೂ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸುವ ಮೂಲಕ ಭಾರತದ ಜಾಗತಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವುದು ಈ ಪ್ರವಾಸದ ಪ್ರಮುಖ ಉದ್ದೇಶವಾಗಿದೆ.

ಈ ಪ್ರವಾಸದ ವೇಳೆ ವ್ಯಾಪಾರ, ಹೂಡಿಕೆ, ರಕ್ಷಣಾ ಸಹಕಾರ, ಹಸಿರು ಇಂಧನ, ತಂತ್ರಜ್ಞಾನ ಅಭಿವೃದ್ಧಿ, ಸಮುದ್ರ ಭದ್ರತೆ ಹಾಗೂ ಜಾಗತಿಕ ರಾಜಕೀಯ ಬೆಳವಣಿಗೆಗಳ ಕುರಿತು ವ್ಯಾಪಕ ಚರ್ಚೆಗಳು ನಡೆಯಲಿವೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರಣದೀರ ಜೈಸ್ವಾಲ್ ಎಕ್ಸನಲ್ಲಿ ಮಾಹಿತಿ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಭೇಟಿ ಯುನೈಟೆಡ್ ಅರಬ್ ಎಮಿರೇಟ್ಸ್ ರಾಷ್ಟ್ರಕ್ಕೆ ಆಗಲಿದೆ. ಅಲ್ಲಿ ಅವರು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿ ಮಾಡಿ ಉಭಯ ರಾಷ್ಟ್ರಗಳ ಆರ್ಥಿಕ ಸಹಕಾರ, ಇಂಧನ ಭದ್ರತೆ, ಹೂಡಿಕೆ ಅವಕಾಶಗಳು ಹಾಗೂ ಭಾರತೀಯ ವಲಸಿಗರ ಹಿತಾಸಕ್ತಿಗಳ ಕುರಿತು ಚರ್ಚಿಸಲಿದ್ದಾರೆ.

ನಂತರ ಪ್ರಧಾನಿ ಮೋದಿ ಅವರು ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿ ರಾಷ್ಟ್ರಗಳಿಗೆ ಭೇಟಿ ನೀಡಿ ಅಲ್ಲಿನ ರಾಷ್ಟ್ರಾಧ್ಯಕ್ಷರು ಹಾಗೂ ಸರ್ಕಾರದ ಮುಖ್ಯಸ್ಥರೊಂದಿಗೆ ಮಹತ್ವದ ಮಾತುಕತೆಗಳನ್ನು ನಡೆಸಲಿದ್ದಾರೆ.

ಭಾರತದ ಜಾಗತಿಕ ಪ್ರಭಾವವನ್ನು ವಿಸ್ತರಿಸುವ ಹಾಗೂ ವಿವಿಧ ರಾಷ್ಟ್ರಗಳೊಂದಿಗೆ ಬಹುಮುಖ ಸಹಕಾರವನ್ನು ಗಟ್ಟಿಗೊಳಿಸುವ ದೃಷ್ಟಿಯಿಂದ ಪ್ರಧಾನಿ ಮೋದಿ ಅವರ ಈ ಪ್ರವಾಸವನ್ನು ಅತ್ಯಂತ ಮಹತ್ವದ್ದಾಗಿ ಪರಿಗಣಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande