
ಬೆಂಗಳೂರು, 14 ಮೇ (ಹಿ.ಸ.) :
ಆ್ಯಂಕರ್ : ರಾಜ್ಯದ ಶಾಲಾ–ಕಾಲೇಜುಗಳಲ್ಲಿ ಜಾರಿಗೊಳಿಸಿರುವ ಪರಿಷ್ಕೃತ ವಸ್ತ್ರಸಂಹಿತೆ, ರಾಷ್ಟ್ರೀಯ ಮಟ್ಟದ ನೀಟ್ ಪರೀಕ್ಷಾ ವಿವಾದ ಹಾಗೂ ಶಿಕ್ಷಣ ವ್ಯವಸ್ಥೆಯ ವಿವಿಧ ವಿಷಯಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಸಂವಿಧಾನದ ಆಶಯವಾದ ಸರ್ವಧರ್ಮ ಸಮಭಾವಕ್ಕೆ ಅನುಗುಣವಾಗಿಯೇ ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಪರಿಷ್ಕೃತ ವಸ್ತ್ರಸಂಹಿತೆಯನ್ನು ಜಾರಿಗೊಳಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಕ್ರಮ ಯಾರನ್ನಾದರೂ ಓಲೈಸುವ ಅಥವಾ ನೋಯಿಸುವ ಉದ್ದೇಶದಿಂದ ಕೈಗೊಳ್ಳಲಾಗಿಲ್ಲ; ಬದಲಾಗಿ ಎಲ್ಲಾ ಜಾತಿ–ಧರ್ಮಗಳ ಆಚರಣೆ ಹಾಗೂ ಸಂಪ್ರದಾಯಗಳಿಗೆ ಗೌರವ ನೀಡುವ ಉದ್ದೇಶ ಹೊಂದಿದೆ ಎಂದು ತಿಳಿಸಿದ್ದಾರೆ.
ಜಾತಿ ಮತ್ತು ಧರ್ಮದ ಆಧಾರದಲ್ಲಿ ಸಮಾಜವನ್ನು ವಿಭಜಿಸಲು ಪ್ರಯತ್ನಿಸುವವರಿಗೆ ಈ ಕ್ರಮದಿಂದ ಅಸಮಾಧಾನ ಉಂಟಾಗಿರುವುದು ಸಹಜ ಎಂದು ಹೇಳಿರುವ ಅವರು, ಅಂತವರು ಆತ್ಮಪರಿಶೀಲನೆ ಮಾಡಿಕೊಳ್ಳಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.
ಇದೇ ವೇಳೆ ದೇಶಾದ್ಯಂತ ಚರ್ಚೆಯಾಗುತ್ತಿರುವ ನೀಟ್ ಪರೀಕ್ಷೆ ರದ್ದು ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಗಳ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ಉಂಟಾಗಿರುವುದನ್ನು ಗಂಭೀರ ಅಪರಾಧವೆಂದು ಹೇಳಿದ್ದಾರೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿಯ ನಾಯಕರು ಮೌನ ವಹಿಸಿರುವುದನ್ನು ಅವರು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ನಡೆದ ಸಿಇಟಿ ಪರೀಕ್ಷೆಯಲ್ಲಿ ಸಣ್ಣ ಪ್ರಮಾಣದ ಲೋಪಗಳು ನಡೆದಾಗ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ ನಾಯಕರು, ಈಗ ಲಕ್ಷಾಂತರ ವಿದ್ಯಾರ್ಥಿಗಳ ಸಮಸ್ಯೆಯ ಬಗ್ಗೆ ಮೌನ ವಹಿಸಿರುವುದು ದ್ವಂದ್ವ ನೀತಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಹಿಜಾಬ್, ಜನಿವಾರ ಹಾಗೂ ಇತರ ಧಾರ್ಮಿಕ ಗುರುತುಗಳಿಗೆ ಸಂಬಂಧಿಸಿದ ಹಿಂದಿನ ಚರ್ಚೆಗಳನ್ನು ಉಲ್ಲೇಖಿಸಿರುವ ಅವರು, ಒಂದೆರಡು ಘಟನೆಗಳನ್ನು ಆಧರಿಸಿ ಕೋಮುಗಲಭೆ ಸೃಷ್ಟಿಸಲು ಯತ್ನಿಸಿದವರು ಈಗ ವಿದ್ಯಾರ್ಥಿಗಳ ಸಮಸ್ಯೆ ಕುರಿತು ಮಾತನಾಡದಿರುವುದು ವಿರೋಧಾಭಾಸವಾಗಿದೆ ಎಂದು ಹೇಳಿದ್ದಾರೆ.
ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿಯಲ್ಲಿರುವ ವಸ್ತ್ರಸಂಹಿತೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೇಂದ್ರೀಯ ವಿದ್ಯಾಲಯಗಳ ನಿಯಮಗಳಿಗೆ ಹೊಂದಾಣಿಕೆಯಾಗಿರುವುದನ್ನು ಅವರು ಉಲ್ಲೇಖಿಸಿದ್ದಾರೆ. ಈ ಕ್ರಮವನ್ನು ವಿರೋಧಿಸುವವರು ಕೇಂದ್ರ ವಿದ್ಯಾಲಯಗಳ ನಿಯಮಗಳನ್ನೂ ವಿರೋಧಿಸಬೇಕಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಹಿಜಾಬ್ ಧರಿಸಲು ಅವಕಾಶ ನೀಡುವುದನ್ನು ಮುಸ್ಲಿಂ ಸಮುದಾಯದ ಓಲೈಕೆ ಎಂದು ಆರೋಪಿಸುವವರೇ, ಜನಿವಾರ ಅಥವಾ ಟರ್ಬನ್ ಧರಿಸಲು ನೀಡುವ ಅವಕಾಶವನ್ನು ಏನೆಂದು ಕರೆಯಬೇಕು ಎಂದು ಅವರು ಪ್ರಶ್ನಿಸಿದ್ದಾರೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ಜಾರಿಗೊಂಡ ಸಿಇಟಿ ಪರೀಕ್ಷಾ ವ್ಯವಸ್ಥೆ ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿತ್ತು ಎಂದು ಹೇಳಿರುವ ಮುಖ್ಯಮಂತ್ರಿ, ಆ ವ್ಯವಸ್ಥೆಯನ್ನು ಕೇಂದ್ರ ಸರ್ಕಾರದ ನೀಟ್ ಮೂಲಕ ದುರ್ಬಲಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.
ದೀರ್ಘಕಾಲದಿಂದ ರಾಜ್ಯ ಸರ್ಕಾರಗಳು ನಡೆಸುತ್ತಿದ್ದ ಸಿಇಟಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗುತ್ತಿತ್ತು. ಆದರೆ ಕೇಂದ್ರ ಸರ್ಕಾರದ ನೀಟ್ ವ್ಯವಸ್ಥೆ ನಿರ್ವಹಣಾ ವೈಫಲ್ಯದಿಂದ ಸಮಸ್ಯೆಗಳು ಉಂಟಾಗಿವೆ ಎಂದು ಅವರು ಹೇಳಿದ್ದಾರೆ.
ಈ ಎಲ್ಲಾ ಲೋಪಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ. ಪ್ರಧಾನಮಂತ್ರಿ ಅವರು ವಿದ್ಯಾರ್ಥಿಗಳ ಕ್ಷಮೆ ಕೇಳಬೇಕು ಹಾಗೂ ಶಿಕ್ಷಣ ಸಚಿವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಶಿಕ್ಷಣ ಸಂಸ್ಥೆಗಳು ವೈಚಾರಿಕತೆ, ವೈಜ್ಞಾನಿಕ ಮನೋಭಾವ, ಸಮಾನತೆ, ಭ್ರಾತೃತ್ವ ಹಾಗೂ ಜಾತ್ಯತೀತ ಮೌಲ್ಯಗಳನ್ನು ಉತ್ತೇಜಿಸಬೇಕು ಎಂದು ಅವರು ಹೇಳಿದ್ದಾರೆ. ಸಾಂವಿಧಾನಿಕ ಜಾತ್ಯತೀತತೆ ಎಂದರೆ ಎಲ್ಲರಿಗೂ ಸಮಾನ ಗೌರವ ನೀಡುವುದು ಹಾಗೂ ತಾರತಮ್ಯರಹಿತ ವ್ಯವಸ್ಥೆಯನ್ನು ರೂಪಿಸುವುದು ಎಂದು ಅವರು ವಿವರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಿಗದಿತ ಸಮವಸ್ತ್ರಕ್ಕೆ ಪೂರಕವಾಗಿ ಮತ್ತು ಅದಕ್ಕೆ ಹೊಂದಿಕೊಳ್ಳುವಂತೆ ಸೀಮಿತ ಸಾಂಪ್ರದಾಯಿಕ ಅಥವಾ ನಂಬಿಕೆ ಆಧಾರಿತ ಗುರುತುಗಳನ್ನು ಧರಿಸಲು ಅವಕಾಶ ನೀಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಸಾರ್ವಜನಿಕ ಸುವ್ಯವಸ್ಥೆ, ಸುರಕ್ಷತೆ, ತರಗತಿ ವಾತಾವರಣ ಹಾಗೂ ಶಿಕ್ಷಣ ಸಂಸ್ಥೆಗಳ ಜಾತ್ಯತೀತ ಸ್ವರೂಪಕ್ಕೆ ಧಕ್ಕೆ ಆಗದಂತೆ ಶಿಸ್ತು, ಸಮಾನತೆ ಮತ್ತು ಘನತೆಯನ್ನು ಕಾಯ್ದುಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.