
ಕೋಲ್ಕತ್ತಾ, 24 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯ ಮೊದಲ ಹಂತದ ಮತದಾನ ರಾಜ್ಯದಲ್ಲಿ ಬದಲಾವಣೆಯ ಅಲೆಗೆ ನಾಂದಿ ಹಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಡಮ್ ಡಮ್ ಪ್ರದೇಶದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ದೀರ್ಘಕಾಲದಿಂದ ಬಂಗಾಳದಲ್ಲಿ ಕಾಣಿಸಿಕೊಂಡಿರುವ ಬದಲಾವಣೆಯ ಮನೋಭಾವ ಮೊದಲ ಹಂತದ ಮತದಾನದಿಂದ ಸ್ಪಷ್ಟವಾಗಿದೆ ಎಂದು ಹೇಳಿದರು. ಜನರು ಬಿಜೆಪಿಯನ್ನು ಬೆಂಬಲಿಸುವ ಮೂಲಕ ನಾಯಕತ್ವ ಬದಲಾವಣೆಗೆ ಸೂಚನೆ ನೀಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಆಡಳಿತದಲ್ಲಿರುವ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಟಿಎಂಸಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದರು. ಜನರು ಮತದಾನದ ಮೂಲಕ ಪ್ರಜಾಪ್ರಭುತ್ವವನ್ನು ಪುನರುಜ್ಜೀವನಗೊಳಿಸಿದ್ದಾರೆ ಎಂದು ಹೇಳಿದರು.
ಬಂಗಾಳವು ಬಿಜೆಪಿ ಸರ್ಕಾರವನ್ನು ಬಯಸುತ್ತಿದೆ ಎಂಬ ಧ್ವನಿ ರಾಜ್ಯಾದ್ಯಂತ ಕೇಳಿಬರುತ್ತಿದೆ ಎಂದು ಹೇಳಿದ ಪ್ರಧಾನಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭೂಮಿಯಲ್ಲಿ ಈ ಚುನಾವಣೆಯನ್ನು ಹೊಸ ಕ್ರಾಂತಿಯ ಆರಂಭವೆಂದು ಬಣ್ಣಿಸಿದರು.
ಮಹಿಳಾ ಸುರಕ್ಷತೆ ಮತ್ತು ಸಬಲೀಕರಣದ ವಿಷಯವನ್ನು ಪ್ರಸ್ತಾಪಿಸಿದ ಅವರು, ಟಿಎಂಸಿ ಮಹಿಳಾ ವಿರೋಧಿ ಪಕ್ಷವಾಗಿದ್ದರೆ, ಬಿಜೆಪಿ ಮಹಿಳಾ ನೇತೃತ್ವದ ಅಭಿವೃದ್ಧಿ ಮಾದರಿಯನ್ನು ಅನುಸರಿಸುತ್ತಿದೆ ಎಂದು ಹೇಳಿದರು. ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಮಹಿಳೆಯರಿಗೆ ಭದ್ರತೆ, ಗೌರವ ಮತ್ತು ಆರ್ಥಿಕ ಸಬಲೀಕರಣ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಆಯುಷ್ಮಾನ್ ಭಾರತ ಯೋಜನೆಯನ್ನು ಬಂಗಾಳದಲ್ಲಿ ಜಾರಿಗೆ ತರಲಾಗಿಲ್ಲ ಎಂದು ಟೀಕಿಸಿದ ಪ್ರಧಾನಿ ಮೋದಿ, ಬಿಜೆಪಿ ಸರ್ಕಾರ ರಚನೆಯಾದಲ್ಲಿ ಜನರಿಗೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಸೌಲಭ್ಯ ನೀಡಲಾಗುವುದು ಎಂದು ಘೋಷಿಸಿದರು.
ಮಧ್ಯಮ ವರ್ಗದ ಹಿತಾಸಕ್ತಿಗಳಿಗೂ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ ಅವರು, ತೆರಿಗೆ ವಿನಾಯಿತಿಗಳು, ಕೈಗೆಟಕುವ ಡಿಜಿಟಲ್ ಸೇವೆಗಳು ಮತ್ತು ವಸತಿ ಯೋಜನೆಗಳ ಮೂಲಕ ಅಭಿವೃದ್ಧಿಗೆ ಉತ್ತೇಜನ ನೀಡಲಾಗುವುದು ಎಂದು ಹೇಳಿದರು. “ಡಬಲ್ ಎಂಜಿನ್” ಸರ್ಕಾರವು ರಾಜ್ಯದ ಪ್ರಗತಿಯನ್ನು ವೇಗಗೊಳಿಸುತ್ತದೆ ಎಂದರು.
ರಾಜ್ಯದ ಕೈಗಾರಿಕಾ ಹಿನ್ನಡೆ ಮತ್ತು “ಸಿಂಡಿಕೇಟ್ ರಾಜ್” ಬಗ್ಗೆ ಟೀಕಿಸಿದ ಪ್ರಧಾನಿ, ಕೈಗಾರಿಕೆಗಳು ಮುಚ್ಚುತ್ತಿವೆ, ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ ಮತ್ತು ಯುವಕರು ವಲಸೆ ಹೋಗುತ್ತಿದ್ದಾರೆ ಎಂದು ಆರೋಪಿಸಿದರು.
ಡಮ್ ಡಮ್ ಪ್ರದೇಶದ ಸ್ಥಳೀಯ ಸಮಸ್ಯೆಗಳಾದ ನೀರು ನಿಲ್ಲುವಿಕೆ, ಹಳೆಯ ಒಳಚರಂಡಿ ವ್ಯವಸ್ಥೆ ಮತ್ತು ಸಂಚಾರ ದಟ್ಟಣೆ ಕುರಿತು ಪ್ರಸ್ತಾಪಿಸಿದ ಅವರು, ಈ ಪ್ರದೇಶವನ್ನು ಆಧುನಿಕವಾಗಿ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದರು.
ಸಭೆಯ ಕೊನೆಯಲ್ಲಿ, ಮುಂದಿನ ಹಂತಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮತದಾರರಿಗೆ ಮನವಿ ಮಾಡಿದ ಪ್ರಧಾನಿ ಮೋದಿ, ಫಲಿತಾಂಶದ ನಂತರ ಜನರು ಸ್ಪಷ್ಟ ಸಂದೇಶ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa