
ಕೋಲ್ಕತ್ತಾ, 24 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ಕಂಡುಬಂದ ಭಾರೀ ಪ್ರತಿಕ್ರಿಯೆ ಬದಲಾವಣೆಯ ಸಂಕೇತವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಹೇಳಿದ್ದಾರೆ.
152 ಸ್ಥಾನಗಳಲ್ಲಿ ನಡೆದ ಮೊದಲ ಹಂತದ ಮತದಾನದಲ್ಲಿ ಭಾರತೀಯ ಜನತಾ ಪಕ್ಷವು 110ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
“ರಾಜ್ಯದ ಜನರು ಈ ಬಾರಿ ಬದಲಾವಣೆಗೆ ಮತ ಚಲಾಯಿಸಿದ್ದಾರೆ. ಈ ಬಾರಿ ಮತದಾನ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ,” ಎಂದು ಅವರು ಹೇಳಿದರು. ಭಾರಿ ಮತದಾನದ ಮೂಲಕ ಜನರು ಬಿಜೆಪಿಯ ಮೇಲೆ ತಮ್ಮ ನಂಬಿಕೆಯನ್ನು ಪುನರುಚ್ಚರಿಸಿದ್ದಾರೆ ಎಂದು ಶಾ ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ ಶಾ, “ಬಿಜೆಪಿ ಅಧಿಕಾರಕ್ಕೆ ಬಂದರೆ ಹೊರಗಿನವರು ಆಡಳಿತ ನಡೆಸುತ್ತಾರೆ ಎಂಬ ತಪ್ಪು ಪ್ರಚಾರ ನಡೆಯುತ್ತಿದೆ. ಪಶ್ಚಿಮ ಬಂಗಾಳದ ಮುಂದಿನ ಮುಖ್ಯಮಂತ್ರಿ ಬಂಗಾಳದಲ್ಲಿ ಜನಿಸಿದ, ಬಂಗಾಳಿ ಭಾಷೆಯಲ್ಲಿ ಶಿಕ್ಷಣ ಪಡೆದ ಮತ್ತು ಬಂಗಾಳಿ ಮಾತನಾಡುವ ವ್ಯಕ್ತಿಯಾಗಿರುತ್ತಾರೆ,” ಎಂದು ಸ್ಪಷ್ಟಪಡಿಸಿದರು.
ಚುನಾವಣೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಹಿಂದಿನ ಅವಧಿಗಳಿಗಿಂತ ಈ ಬಾರಿ ಮತದಾನ ಹೆಚ್ಚು ಶಾಂತಿಯುತವಾಗಿ ನಡೆದಿದ್ದು, ಗಾಯಗೊಂಡವರ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿದೆಯೆಂದು ಹೇಳಿದರು. 2016, 2021, 2023 ಹಾಗೂ 2024ರ ಚುನಾವಣೆಗಳೊಂದಿಗೆ ಹೋಲಿಸಿದರೆ ಈ ಬಾರಿ ಮೊದಲ ಹಂತದಲ್ಲಿ 30ಕ್ಕಿಂತ ಕಡಿಮೆ ಮಂದಿ ಗಾಯಗೊಂಡಿದ್ದು, ಯಾವುದೇ ಸಾವು ಸಂಭವಿಸಿಲ್ಲ ಎಂದು ಶಾ ಮಾಹಿತಿ ನೀಡಿದರು.
ಚುನಾವಣಾ ಆಯೋಗದ ಪ್ರಕಾರ, ಮೊದಲ ಹಂತದಲ್ಲಿ ಶೇಕಡಾ 92.88ರಷ್ಟು ಮತದಾನ ದಾಖಲಾಗಿದ್ದು, ಇದು ರಾಜ್ಯದ ಇತಿಹಾಸದಲ್ಲೇ ಅತ್ಯಧಿಕವಾಗಿದೆ. ಭಾರೀ ಮತದಾನದ ಹಿನ್ನೆಲೆ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಎರಡೂ ಪಕ್ಷಗಳು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿವೆ.
ರಾಜ್ಯದಲ್ಲಿ ಎರಡನೇ ಹಂತದ ಮತದಾನವು ಏಪ್ರಿಲ್ 29ರಂದು 142 ಸ್ಥಾನಗಳಿಗೆ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa