

ಕೋಲ್ಕತ್ತಾ, 24 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರದ ನಡುವೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಳಿಗ್ಗೆ ಕೋಲ್ಕತ್ತಾದ ಗಂಗಾ ಥಟದ ಗಂಗಾ ನದಿಯಲ್ಲಿ ದೋಣಿ ಸವಾರಿ ನಡೆಸಿ ಜನರೊಂದಿಗೆ ಸಂವಹನ ನಡೆಸಿದರು.
ಜಾರ್ಗ್ರಾಮದಲ್ಲಿ ಸ್ಥಳೀಯ ಖಾದ್ಯ ‘ಝಲ್ಮೂರಿ’ ಸವಿದ ನಂತರ, ಪ್ರಧಾನಿ ಅನಿರೀಕ್ಷಿತವಾಗಿ ಗಂಗಾ ತೀರಕ್ಕೆ ಭೇಟಿ ನೀಡಿದರು. ಈ ವೇಳೆ ಅವರನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ಶಿಷ್ಟಾಚಾರವನ್ನು ಮೀರಿ ಜನರ ನಡುವೆ ತೆರಳಿ ಮಾತುಕತೆ ನಡೆಸಿದ ಅವರು, ಒಬ್ಬ ವ್ಯಕ್ತಿಯನ್ನು ತಬ್ಬಿಕೊಂಡ ಕ್ಷಣ ವಿಶೇಷವಾಗಿ ಗಮನ ಸೆಳೆಯಿತು. ಪ್ರಧಾನಿಯನ್ನು ಭೇಟಿಯಾದ ಬಳಿಕ ಆ ವ್ಯಕ್ತಿ ಭಾವುಕರಾಗಿ ತನ್ನ ಜೀವನದ ಸಂಕಷ್ಟಗಳನ್ನು ವಿವರಿಸಿದ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಹಿಂದಿನ ದಿನ ಬೇಲೂರು ಮಠದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ, ಹೌರಾ ಸೇತುವೆ ಸುತ್ತಮುತ್ತಲಿನ ದೃಶ್ಯಗಳೊಂದಿಗೆ ಗಂಗಾ ತೀರದ ಸೌಂದರ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದರು. ಅವರ ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಚಿತ್ರಗಳನ್ನು ಹಂಚಿಕೊಂಡ ಅವರು, “ಗಂಗಾ ನದಿ ಪ್ರತಿಯೊಬ್ಬ ಬಂಗಾಳಿಯ ಹೃದಯದಲ್ಲಿ ವಿಶೇಷ ಸ್ಥಾನ ಹೊಂದಿದೆ. ಅದು ಕೇವಲ ನದಿಯಲ್ಲ, ಬಂಗಾಳದ ಆತ್ಮದಲ್ಲಿ ಹರಿಯುವ ಸಾಂಸ್ಕೃತಿಕ ತೊರೆ” ಎಂದು ಅಭಿಪ್ರಾಯಪಟ್ಟರು. ಗಂಗಾ ಮಾತೆಯ ಪವಿತ್ರ ಜಲವು ನಾಗರಿಕತೆಯ ಶಾಶ್ವತ ಪ್ರಜ್ಞೆಯನ್ನು ಹೊತ್ತೊಯ್ಯುತ್ತದೆ ಎಂದು ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯ ದೋಣಿಗಾರರು ಹಾಗೂ ಬೆಳಗಿನ ವಾಕಿಂಗ್ ಮಾಡುವವರನ್ನು ಭೇಟಿಯಾದ ಪ್ರಧಾನಿ, ಅವರ ಪರಿಶ್ರಮ, ಶಿಸ್ತು ಮತ್ತು ಸಮರ್ಪಣೆಯನ್ನು ಶ್ಲಾಘಿಸಿದರು.
ಗುರುವಾರ ಹೌರಾದಿಂದ ಕೋಲ್ಕತ್ತಾವರೆಗೆ ನಡೆದ ಭಾರೀ ರೋಡ್ ಶೋ ಬಳಿಕ ರಾಜಭವನದಲ್ಲಿ ರಾತ್ರಿ ಕಳೆದ ಅವರು, ಮುಂಜಾನೆ ಗಂಗಾ ತೀರ ತಲುಪಿದ್ದರು. ಬಂಗಾಳದ ಅಭಿವೃದ್ಧಿ ಮತ್ತು ಜನರ ಸಮೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡುವ ಬದ್ಧತೆಯನ್ನು ಪುನರುಚ್ಚರಿಸಿದರು.
ಇಂದು ಕೂಡ ಪ್ರಧಾನಿ ಮೋದಿ ಅವರು ರಾಜ್ಯದಲ್ಲಿ ಎರಡು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa