
ಲಕ್ನೋ, 24 ಏಪ್ರಿಲ್ (ಹಿ.ಸ.) :
ಆ್ಯಂಕರ್ : ದೇಶದ ಕೃಷಿ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ಪ್ರತಿ ರಾಜ್ಯವೂ ಸ್ವಂತ ಕೃಷಿ ಮಾರ್ಗಸೂಚಿ ರೂಪಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಕರೆ ನೀಡಿದ್ದಾರೆ.
ಉತ್ತರ ಪ್ರದೇಶ ರಾಜಧಾನಿ ಲಖನೌನಲ್ಲಿ ನಡೆದ ಪ್ರಾದೇಶಿಕ ಕೃಷಿ ಸಮ್ಮೇಳನವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಗುರಿ ಸಾಧನೆಗೆ ರಾಜ್ಯಗಳ ಮಟ್ಟದಲ್ಲಿ ಸಮಗ್ರ ಯೋಜನೆ ಅಗತ್ಯವೆಂದು ಒತ್ತಿಹೇಳಿದರು.
ನಕಲಿ ರಸಗೊಬ್ಬರ ಹಾಗೂ ಕೀಟನಾಶಕಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಸೂಚನೆ ನೀಡಿದ ಅವರು, ರೈತರ ಹಿತದೃಷ್ಟಿಯಿಂದ ಪರಿಣಾಮಕಾರಿ ಅಭಿಯಾನಗಳನ್ನು ರೂಪಿಸುವ ಅಗತ್ಯವಿದೆ ಎಂದು ತಿಳಿಸಿದರು.
ಉತ್ತರ ಪ್ರದೇಶ ದೇಶದ ಆಹಾರ ಧಾನ್ಯ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ರಾಜ್ಯದ ಮಣ್ಣು, ಹವಾಮಾನ ಮತ್ತು ರೈತರ ಪರಿಶ್ರಮ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಚೌಹಾಣ್ ಪ್ರಶಂಸಿಸಿದರು. ಇದೇ ವೇಳೆ, ಉತ್ತರ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಆಲೂಗಡ್ಡೆ ಕೇಂದ್ರ ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದಾಗಿ ಘೋಷಿಸಿದರು.
ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಮೂರು ಪ್ರಮುಖ ಗುರಿಗಳನ್ನು ಅವರು ಸೂಚಿಸಿದರು — ಆಹಾರ ಭದ್ರತೆ, ರೈತರ ಆದಾಯ ಹೆಚ್ಚಳ ಮತ್ತು ಪೌಷ್ಟಿಕ ಆಹಾರ ಒದಗಿಕೆ. ಉತ್ಪಾದನೆ ಹೆಚ್ಚಿಸುವುದು, ವೆಚ್ಚ ಕಡಿಮೆ ಮಾಡುವುದು, ನ್ಯಾಯಯುತ ಬೆಲೆ ನೀಡುವುದು ಹಾಗೂ ಕೃಷಿಯನ್ನು ವೈವಿಧ್ಯಗೊಳಿಸುವುದು ಅಗತ್ಯವೆಂದರು.
ರಸಗೊಬ್ಬರಗಳ ಅತಿಯಾದ ಬಳಕೆ ಮಣ್ಣಿನ ಆರೋಗ್ಯ ಹಾಳು ಮಾಡುತ್ತಿದೆ ಎಂಬ ಕಳವಳ ವ್ಯಕ್ತಪಡಿಸಿದ ಅವರು, ನೈಸರ್ಗಿಕ ಮತ್ತು ಸಾವಯವ ಕೃಷಿಯತ್ತ ಸಾಗುವಂತೆ ರೈತರಿಗೆ ಕರೆ ನೀಡಿದರು. ಹಣ್ಣು, ತರಕಾರಿ ಮತ್ತು ಔಷಧೀಯ ಬೆಳೆಗಳತ್ತ ಗಮನ ಹರಿಸುವುದರ ಜೊತೆಗೆ ಹವಾಮಾನಕ್ಕೆ ಹೊಂದಿಕೊಳ್ಳುವ ಬೀಜಗಳ ಅಭಿವೃದ್ಧಿ ಅಗತ್ಯವೆಂದರು.
ಭಾರತ ಆಹಾರ ಉತ್ಪಾದನೆಯಲ್ಲಿ ಆತ್ಮನಿರ್ಭರತೆಯನ್ನು ಸಾಧಿಸಿರುವುದಾಗಿ ಹೇಳಿದ ಅವರು, ಅಕ್ಕಿ ಉತ್ಪಾದನೆಯಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಬಾಸ್ಮತಿ ಅಕ್ಕಿಯ ಬೇಡಿಕೆ ಜಾಗತಿಕವಾಗಿ ಹೆಚ್ಚುತ್ತಿದೆ ಎಂದರು. ಸಣ್ಣ ರೈತರು ಪಶುಸಂಗೋಪನೆ, ಮೀನುಗಾರಿಕೆ ಮತ್ತು ಮರ ಆಧಾರಿತ ಕೃಷಿ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಬಹುದೆಂದು ಸಲಹೆ ನೀಡಿದರು.
ರಾಜ್ಯಗಳಲ್ಲಿ “ಕೃಷಿ ಸಂಕಲ್ಪ ಅಭಿಯಾನ” ನಡೆಸುವಂತೆ ಕರೆ ನೀಡಿದ ಅವರು, ಸಂಶೋಧನೆ ಮತ್ತು ತಂತ್ರಜ್ಞಾನವನ್ನು ನೇರವಾಗಿ ರೈತರ ಬಳಿಗೆ ತಲುಪಿಸುವುದಕ್ಕೆ ಒತ್ತು ನೀಡಿದರು. ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ಪಡೆಯದ ರೈತರಿಗೆ ಅದನ್ನು ತಲುಪಿಸುವ ಕೆಲಸವನ್ನು ರಾಜ್ಯ ಸರ್ಕಾರಗಳು ಅಭಿಯಾನ ರೂಪದಲ್ಲಿ ಕೈಗೊಳ್ಳಬೇಕು ಎಂದು ಸೂಚಿಸಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯ ಕೃಷಿ ಸಚಿವರು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa