
ನವದೆಹಲಿ, 23 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪಶ್ಚಿಮ ಏಷ್ಯಾದ ಸಂಘರ್ಷದ ಹಿನ್ನೆಲೆಯಲ್ಲಿ ಹಾರ್ಮುಜ್ ಜಲಸಂಧಿ ಮೂಲಕ ತೈಲ ಹಾಗೂ ಎಲ್ಪಿಜಿ ಆಮದಿನ ಮೇಲೆ ಕೆಲವು ಮಟ್ಟಿನ ಪರಿಣಾಮ ಕಂಡುಬಂದಿದ್ದರೂ, ದೇಶದಲ್ಲಿ ಎಲ್ಪಿಜಿ ಪೂರೈಕೆ ಸಂಪೂರ್ಣವಾಗಿ ಸಾಮಾನ್ಯವಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಮಾತನಾಡಿ, ಸಾರ್ವಜನಿಕರಿಗೆ ಕನಿಷ್ಠ ಅನಾನುಕೂಲತೆಯೂ ಆಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಬುಧವಾರ ಮಾತ್ರವೇ 52 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಎಲ್ಪಿಜಿ ಪೂರೈಸಲಾಗಿದೆ. ಪ್ರಸ್ತುತ ದಿನಕ್ಕೆ 44ರಿಂದ 45 ಲಕ್ಷ ಸಿಲಿಂಡರ್ಗಳ ಬುಕ್ಕಿಂಗ್ ನಡೆಯುತ್ತಿದೆ ಎಂದರು.
ಡಿ.ಎ.ಸಿ. (ಡಿಲಿವರಿ ಅಥೋರೈಜೇಶನ್ ಕೋಡ್) ವ್ಯವಸ್ಥೆಯ ಮೂಲಕ ಶೇಕಡಾ 94ರಷ್ಟು ಸಿಲಿಂಡರ್ಗಳನ್ನು ವಿತರಿಸಲಾಗುತ್ತಿದೆ. ಇದರಿಂದ ಸಿಲಿಂಡರ್ಗಳ ದುರುಪಯೋಗ ಅಥವಾ ಬೇರೆಡೆಗೆ ತಿರುಗಿಸುವಿಕೆ ತಡೆಯಲು ಸಹಾಯವಾಗುತ್ತಿದೆ ಎಂದು ವಿವರಿಸಿದರು. ಏಪ್ರಿಲ್ ಆರಂಭದಿಂದ ವಾಣಿಜ್ಯ ಎಲ್ಪಿಜಿ ಮಾರಾಟವು ಸುಮಾರು 14 ಲಕ್ಷ ಟನ್ಗಳಷ್ಟಾಗಿದೆ ಎಂದರು.
ವಿದೇಶದಲ್ಲಿರುವ ಭಾರತೀಯರ ಸುರಕ್ಷತೆಗೆ ಆದ್ಯತೆ
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಅಸೀಮ್ ಆರ್ ಮಹಾಜನ್ ಮಾತನಾಡಿ, ಕೊಲ್ಲಿ ಪ್ರದೇಶದ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸಲಾಗುತ್ತಿದೆ ಎಂದರು. ಭಾರತೀಯರ ಸುರಕ್ಷತೆ ಮತ್ತು ಕಲ್ಯಾಣವೇ ಮೊದಲ ಆದ್ಯತೆ ಎಂದು ಹೇಳಿದರು.
ಫೆಬ್ರವರಿ 28ರಿಂದ ಇದುವರೆಗೆ 12 ಲಕ್ಷಕ್ಕೂ ಹೆಚ್ಚು ಭಾರತೀಯರು ದೇಶಕ್ಕೆ ಮರಳಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ, ಓಮನ್ ಮತ್ತು ಬಹ್ರೇನ್ ದೇಶಗಳಿಂದ ಹೆಚ್ಚುವರಿ ವಿಮಾನ ಸೇವೆಗಳನ್ನು ನಡೆಸಲಾಗುತ್ತಿದೆ. ಕೆಲವು ವಿಮಾನ ಮಾರ್ಗಗಳು ಮುಚ್ಚಲ್ಪಟ್ಟಿದ್ದರೂ ಇರಾನ್, ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಮೂಲಕ ಪರ್ಯಾಯ ಮಾರ್ಗಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.
ಭಾರತೀಯ ನಾವಿಕರು ಸುರಕ್ಷಿತ
ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ಜಂಟಿ ಕಾರ್ಯದರ್ಶಿ ಮುಖೇಶ್ ಮಂಗಲ್ ಮಾಹಿತಿ ನೀಡಿದ್ದು, ಈ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 65 ಮಂದಿ ಸೇರಿದಂತೆ ಒಟ್ಟು 2,680 ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ದೇಶಕ್ಕೆ ಮರಳಿಸಲಾಗಿದೆ ಎಂದರು.
ದೇಶದ ಎಲ್ಲಾ ಬಂದರುಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲಿಯೂ ದಟ್ಟಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa