ಉತ್ತರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ; 11 ಮಂದಿ ದಾರುಣ ಅಂತ್ಯ
ಮಿರ್ಜಾಪುರ, 23 ಏಪ್ರಿಲ್ (ಹಿ.ಸ.) : ಆ್ಯಂಕರ್ : ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಡ್ರಮ್ಮೊಂಡ್ಗಂಜ್ ಕಣಿವೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಬಡ್ಕಾ ಮೋರ್ ಘುಮನ್ ಬಳಿ ರಾತ್ರಿ ಸುಮಾರು 8 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ. ಮಧ್ಯಪ್ರದ
Accident


ಮಿರ್ಜಾಪುರ, 23 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಡ್ರಮ್ಮೊಂಡ್ಗಂಜ್ ಕಣಿವೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ.

ಬಡ್ಕಾ ಮೋರ್ ಘುಮನ್ ಬಳಿ ರಾತ್ರಿ ಸುಮಾರು 8 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ. ಮಧ್ಯಪ್ರದೇಶದಿಂದ ಕಡಲೆಕಾಯಿ ತುಂಬಿಕೊಂಡು ಬರುತ್ತಿದ್ದ ಟ್ರಕ್ಗೆ ಅಕಸ್ಮಿಕವಾಗಿ ಬ್ರೇಕ್ ವೈಫಲ್ಯ ಉಂಟಾಗಿ, ಮೊದಲು ಕಂಟೈನರ್ಗೆ ಡಿಕ್ಕಿ ಹೊಡೆದು ಬಳಿಕ ಮುಂದೆ ಸಾಗುತ್ತಿದ್ದ ಬೊಲೆರೊ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಬೊಲೆರೊ ಡಿವೈಡರ್ಗೆ ತಗುಲಿ ತಕ್ಷಣವೇ ಬೆಂಕಿಗಾಹುತಿಯಾಯಿತು.

ಬೊಲೆರೊದಲ್ಲಿದ್ದ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 8 ಮಂದಿ ಬೆಂಕಿಯಲ್ಲಿ ಸಿಲುಕಿ ಜೀವಂತವಾಗಿ ಸುಟ್ಟುಹೋದರು. ಇದಲ್ಲದೆ ಟ್ರಕ್ ಚಾಲಕ, ಕ್ಲೀನರ್ ಹಾಗೂ ಕಾರು ಚಾಲಕ ಸೇರಿ ಒಟ್ಟು 11 ಮಂದಿ ಮೃತಪಟ್ಟಿದ್ದಾರೆ. ಸೋನ್ಭದ್ರ ಮೂಲದ ಕಾರು ಚಾಲಕ ಜೈ ಪ್ರಕಾಶ್ (28) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದ ಬಳಿಕ ಟ್ರಕ್ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು, ನಿಲುಗಡೆಗೊಂಡಿದ್ದ ಟ್ರೇಲರ್ಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನಾಶವಾಗಿದೆ. ಅಗ್ನಿಶಾಮಕ ದಳವು ಸುಮಾರು ಒಂದು ಗಂಟೆಯ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತಂದರೂ, ಆಗಾಗಲೇ ವಾಹನಗಳು ಸುಟ್ಟು ಕರಕಲಾಗಿದ್ದವು.

ಘಟನೆಯ ಮಾಹಿತಿ ತಿಳಿದ ತಕ್ಷಣ ಜಿಲ್ಲಾ ಆಡಳಿತ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದರು. ಜಿಲ್ಲಾ ಮ್ಯಾಜಿಸ್ಟ್ರೇಟ್ ಪವನ್ ಕುಮಾರ್ ಗಂಗ್ವಾರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅಪರ್ಣಾ ರಾಜ್ ಕೌಶಿಕ್ ಪರಿಸ್ಥಿತಿಯನ್ನು ಪರಿಶೀಲಿಸಿದರು. ಮೃತರ ಗುರುತಿನ ಕಾರ್ಯ ನಡೆಯುತ್ತಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿ, ತಕ್ಷಣ ಪರಿಹಾರ ಹಾಗೂ ರಕ್ಷಣಾ ಕಾರ್ಯಗಳನ್ನು ವೇಗಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅಪಘಾತದ ಪರಿಣಾಮ ವಾರಾಣಸಿ–ರೇವಾ ರಸ್ತೆ ಮೇಲೆ ಸುಮಾರು ನಾಲ್ಕು ಗಂಟೆಗಳ ಕಾಲ ಭಾರಿ ಸಂಚಾರ ದಟ್ಟಣೆ ಉಂಟಾಯಿತು. ಬಳಿಕ ತಡರಾತ್ರಿ ಒಂದೇ ಮಾರ್ಗದಲ್ಲಿ ಸಂಚಾರವನ್ನು ಪುನಃ ಆರಂಭಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande