ಪ. ಬಂಗಾಳ ಚುನಾವಣೆಗೆ ಮತದಾನ ಆರಂಭ ; ಹೆಚ್ಚಿನ ಮತದಾನಕ್ಕೆ ಪ್ರಧಾನಿ ಮೋದಿ ಮನವಿ
ನವದೆಹಲಿ, 23 ಏಪ್ರಿಲ್ (ಹಿ.ಸ.) : ಆ್ಯಂಕರ್ : ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ 2026 ಮೊದಲ ಹಂತದ ಮತದಾನವು ಗುರುವಾರ ಬೆಳಿಗ್ಗೆ 152 ವಿಧಾನ ಸಭಾ ಕ್ಷೇತ್ರಗಳಲ್ಲಿ ಆರಂಭವಾಗಿದೆ. ಮತದಾನ ಪ್ರಾರಂಭವಾದ ಕೆಲವೇ ಕ್ಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಲ
Pm photo


ನವದೆಹಲಿ, 23 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ 2026 ಮೊದಲ ಹಂತದ ಮತದಾನವು ಗುರುವಾರ ಬೆಳಿಗ್ಗೆ 152 ವಿಧಾನ ಸಭಾ ಕ್ಷೇತ್ರಗಳಲ್ಲಿ ಆರಂಭವಾಗಿದೆ. ಮತದಾನ ಪ್ರಾರಂಭವಾದ ಕೆಲವೇ ಕ್ಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಲು ಮನವಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ನೀಡಿದ ಪ್ರಧಾನಿ ಮೋದಿ, ಮತದಾನವನ್ನು “ಪ್ರಜಾಪ್ರಭುತ್ವದ ಹಬ್ಬ” ಎಂದು ಬಣ್ಣಿಸಿ, ರಾಜ್ಯದ ನಾಗರಿಕರು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಬೇಕು ಎಂದು ಕರೆ ನೀಡಿದರು. ವಿಶೇಷವಾಗಿ ಯುವಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಬೇಕೆಂದು ಅವರು ಒತ್ತಾಯಿಸಿದರು.

ಮೊದಲ ಹಂತದಲ್ಲಿ ರಾಜ್ಯದ 16 ಜಿಲ್ಲೆಗಳಾದ ಡಾರ್ಜಿಲಿಂಗ್, ಕಾಲಿಂಪಾಂಗ್, ಜಲ್ಪೈಗುರಿ, ಅಲಿಪುರ್ದುವಾರ್, ಕೂಚ್ ಬೆಹಾರ್, ಉತ್ತರ ದಿನಾಜ್ಪುರ, ದಕ್ಷಿಣ ದಿನಾಜ್ಪುರ, ಮಾಲ್ಡಾ, ಮುರ್ಷಿದಾಬಾದ್, ಬಿರ್ಭುಮ್, ಪಶ್ಚಿಮ ಬರ್ಧಮಾನ್, ಪುರುಲಿಯಾ, ಬಂಕುರಾ, ಜಾರ್ಗ್ರಾಮ್, ಪಶ್ಚಿಮ ಮೇದಿನಿಪುರ ಹಾಗೂ ಪೂರ್ವ ಮೇದಿನಿಪುರ ಸೇರಿದಂತೆ ಒಟ್ಟು 152 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.

ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಮತದಾನಕ್ಕಾಗಿ ಭಾರತೀಯ ಚುನಾವಣಾ ಆಯೋಗ ರಾಜ್ಯಾದ್ಯಂತ ಸುಮಾರು 2,400 ಕೇಂದ್ರೀಯ ಪಡೆಗಳನ್ನು ನಿಯೋಜಿಸಿದೆ. ಪೂರ್ವ ಮೇದಿನೀಪುರದಲ್ಲಿ ಅತಿ ಹೆಚ್ಚು 273 ಕಂಪನಿಗಳು, ಪಶ್ಚಿಮ ಮೇದಿನೀಪುರದಲ್ಲಿ 271 ಕಂಪನಿಗಳು ಹಾಗೂ ಮುರ್ಷಿದಾಬಾದ್ನಲ್ಲಿ 240 ಕಂಪನಿಗಳು ನಿಯೋಜನೆಯಾಗಿವೆ.

ಮೊದಲ ಹಂತಕ್ಕೆ ಒಟ್ಟು 44,376 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ 2,958 ಸಹಾಯಕ ಮತಗಟ್ಟೆಗಳು ಸೇರಿವೆ. 5,487 ನಗರ ಪ್ರದೇಶಗಳಲ್ಲಿ ಹಾಗೂ 35,931 ಗ್ರಾಮೀಣ ಪ್ರದೇಶಗಳಲ್ಲಿ ಮತಗಟ್ಟೆಗಳು ಸ್ಥಾಪನೆಯಾಗಿವೆ. ವಿಶೇಷವಾಗಿ 5,644 ಮತಗಟ್ಟೆಗಳನ್ನು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿ ನಿರ್ವಹಿಸುತ್ತಿರುವುದು ಗಮನಾರ್ಹ. ಜೊತೆಗೆ 207 ಮಾದರಿ ಮತಗಟ್ಟೆಗಳನ್ನೂ ನಿರ್ಮಿಸಲಾಗಿದೆ.

ಈ ಹಂತದಲ್ಲಿ 167 ಮಹಿಳೆಯರು ಸೇರಿ ಒಟ್ಟು 1,478 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕೂಚ್ ಬೆಹಾರ್ ದಕ್ಷಿಣ, ಕರಂಡಿಘಿ ಮತ್ತು ಇಟಾಹಾರ್ ಕ್ಷೇತ್ರಗಳಲ್ಲಿ ಅತಿ ಹೆಚ್ಚು 15 ಅಭ್ಯರ್ಥಿಗಳಿದ್ದರೆ, ಚಂದ್ರಕೋನಾ ಕ್ಷೇತ್ರದಲ್ಲಿ ಅತಿ ಕಡಿಮೆ ಐದು ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

ಮತದಾರರ ವಿವರಗಳ ಪ್ರಕಾರ, 100 ವರ್ಷ ಮೇಲ್ಪಟ್ಟ 4,025 ಮತದಾರರು ಇದ್ದರೆ, 85 ವರ್ಷ ಮೇಲ್ಪಟ್ಟವರ ಸಂಖ್ಯೆ 2.46 ಲಕ್ಷವಾಗಿದೆ. ಅಂಗವಿಕಲ ಮತದಾರರ ಸಂಖ್ಯೆ 2,53,244 ಆಗಿದೆ.

ಬಿಗಿ ಭದ್ರತೆ, ವ್ಯಾಪಕ ಕಣ್ಗಾವಲು ಹಾಗೂ ಉನ್ನತ ನಾಯಕತ್ವದ ಮನವಿಗಳ ನಡುವೆ ನಡೆಯುತ್ತಿರುವ ಈ ಮೊದಲ ಹಂತದ ಮತದಾನವು ರಾಜ್ಯದ ರಾಜಕೀಯ ಭವಿಷ್ಯ ನಿರ್ಧಾರದಲ್ಲಿ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande