
ಕೈರೋ, 23 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಭಾರತ ಮತ್ತು ಈಜಿಪ್ಟ್ ನಡುವಿನ ರಕ್ಷಣಾ ಸಂಬಂಧಗಳಿಗೆ ಮತ್ತಷ್ಟು ಬಲ ನೀಡುವ ದಿಶೆಯಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದ್ದು, ಕೈರೋದಲ್ಲಿ ನಡೆದ 11ನೇ ಜಂಟಿ ರಕ್ಷಣಾ ಸಮಿತಿ ಸಭೆಯಲ್ಲಿ ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ.
ಸಭೆಯಲ್ಲಿ ರಕ್ಷಣಾ ಉದ್ಯಮದಲ್ಲಿ ಸಹಕಾರವನ್ನು ಗಟ್ಟಿಗೊಳಿಸುವುದು, ಸಂಯುಕ್ತ ಯೋಜನೆಗಳಲ್ಲಿ ಕೈಜೋಡಿಸುವುದು ಹಾಗೂ ತಂತ್ರಜ್ಞಾನ ವಿನಿಮಯವನ್ನು ಹೆಚ್ಚಿಸುವ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಉಭಯ ರಾಷ್ಟ್ರಗಳ ನಡುವೆ ಇರುವ ಅವಕಾಶಗಳನ್ನು ಅನ್ವೇಷಿಸಲು ಎರಡೂ ಕಡೆಯವರು ಸಮ್ಮತಿಸಿದರು.
ಭಾರತೀಯ ನಿಯೋಗವನ್ನು ರಕ್ಷಣಾ ಸಚಿವಾಲಯದ ಜಂಟಿ ಕಾರ್ಯದರ್ಶಿ (ಅಂತಾರಾಷ್ಟ್ರೀಯ ಸಹಕಾರ) ಅಮಿತಾಭ್ ಪ್ರಸಾದ್ ಮುನ್ನಡೆಸಿದ್ದು, ಸಶಸ್ತ್ರ ಪಡೆಗಳ ಹಿರಿಯ ಅಧಿಕಾರಿಗಳು ಸಹ ಭಾಗವಹಿಸಿದ್ದರು. ಈಜಿಪ್ಟ್ ಪರವಾಗಿ ಸಶಸ್ತ್ರ ಪಡೆಗಳು ಹಾಗೂ ರಕ್ಷಣಾ ಸಚಿವಾಲಯದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸಭೆಯಲ್ಲಿ ಕಳೆದ ಜೆಡಿಸಿ ನಂತರದ ಪ್ರಗತಿಯನ್ನು ಪರಿಶೀಲಿಸಲಾಗಿದ್ದು, 2026–27ರ ದ್ವಿಪಕ್ಷೀಯ ರಕ್ಷಣಾ ಸಹಕಾರ ಯೋಜನೆಗೆ ರೂಪುರೇಷೆ ಸಿದ್ಧಪಡಿಸಲಾಯಿತು. ಇದರಡಿ
ಮಿಲಿಟರಿ ಸಂಪರ್ಕ ವ್ಯವಸ್ಥೆ ಬಲಪಡಿಸುವುದು
ಸಂಯುಕ್ತ ತರಬೇತಿ ಕಾರ್ಯಕ್ರಮಗಳನ್ನು ವಿಸ್ತರಿಸುವುದು
ಕಡಲ ಭದ್ರತಾ ಸಹಕಾರ ಹೆಚ್ಚಿಸುವುದು
ಸಂಯುಕ್ತ ಸೈನಿಕ ವ್ಯಾಯಾಮಗಳನ್ನು ಉತ್ತೇಜಿಸುವುದು
ತಂತ್ರಜ್ಞಾನ ವಿನಿಮಯಕ್ಕೆ ಉತ್ತೇಜನ ನೀಡುವುದು
ಮುಖ್ಯ ಅಂಶಗಳಾಗಿವೆ.
ಭಾರತೀಯ ನಿಯೋಗವು ದೇಶದ ವೇಗವಾಗಿ ಬೆಳೆಯುತ್ತಿರುವ ರಕ್ಷಣಾ ಉತ್ಪಾದನಾ ಸಾಮರ್ಥ್ಯಗಳ ಬಗ್ಗೆ ಪ್ರಸ್ತುತಿಯನ್ನು ನೀಡಿತು. ಭಾರತದ ರಕ್ಷಣಾ ಉತ್ಪಾದನೆ $20 ಶತಕೋಟಿಯನ್ನು ಮೀರಿದ್ದು, $4 ಶತಕೋಟಿ ಮೌಲ್ಯದ ರಫ್ತು 100ಕ್ಕೂ ಹೆಚ್ಚು ದೇಶಗಳಿಗೆ ಸಾಗುತ್ತಿದೆ ಎಂದು ತಿಳಿಸಲಾಯಿತು.
ಸಭೆಯ ವೇಳೆ ಮೊದಲ ಬಾರಿಗೆ ನೌಕಾ ಸಿಬ್ಬಂದಿ ಮಟ್ಟದ ಮಾತುಕತೆ ನಡೆಯಿತು. ಹಿಂದೂ ಮಹಾಸಾಗರ ಪ್ರದೇಶದಲ್ಲಿ ನೌಕಾಯಾನದ ಸ್ವಾತಂತ್ರ್ಯ ಕಾಪಾಡುವಲ್ಲಿ ಭಾರತೀಯ ನೌಕಾಪಡೆಯ ಪಾತ್ರವನ್ನು ಈಜಿಪ್ಟ್ ಪ್ರಶಂಸಿಸಿತು. ಜೊತೆಗೆ ಕಡಲ ಭದ್ರತೆಯಲ್ಲಿ ಭಾರತದ ಮಾಹಿತಿ ಸಮ್ಮಿಳನ ಕೇಂದ್ರದ ಪಾತ್ರಕ್ಕೂ ಮೆಚ್ಚುಗೆ ವ್ಯಕ್ತವಾಯಿತು.
ಇದೇ ಸಂದರ್ಭದಲ್ಲಿ ಭಾರತೀಯ ನಿಯೋಗವು ಈಜಿಪ್ಟ್ ವಾಯುಪಡೆಯ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಅಮರ್ ಅಬ್ದೆಲ್ ರೆಹಮಾನ್ ಸಖರ್ ಅವರನ್ನು ಭೇಟಿ ಮಾಡಿ, ವಾಯುಪಡೆಗಳ ನಡುವಿನ ಸಹಕಾರವನ್ನು ಇನ್ನಷ್ಟು ಗಟ್ಟಿಗೊಳಿಸುವ ಬಗ್ಗೆ ಚರ್ಚಿಸಿತು.
ಅಲ್ಲದೆ, ಮೊದಲ ಮತ್ತು ಎರಡನೇ ಮಹಾಯುದ್ಧಗಳಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಹೆಲಿಪೋಲಿಸ್ ಯುದ್ಧ ಸ್ಮಾರಕದಲ್ಲಿ ಪುಷ್ಪಾರ್ಚನೆ ನೆರವೇರಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa