
ಕೋಲ್ಕತ್ತಾ, 20 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಗೆ ಮುನ್ನ ತೃಣಮೂಲ ಕಾಂಗ್ರೆಸ್ಗೆ ಚುನಾವಣಾ ಕಾರ್ಯತಂತ್ರ ರೂಪಿಸುತ್ತಿದ್ದ ಐ-ಪಿಎಸಿ ಸಂಸ್ಥೆ 20 ದಿನಗಳ ಕಾಲ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಂಸ್ಥೆಯು ಶನಿವಾರ ತಡರಾತ್ರಿ ತನ್ನ ಸಿಬ್ಬಂದಿಗೆ 20 ದಿನಗಳ ರಜೆ ನೀಡಿರುವ ಕುರಿತು ಇಮೇಲ್ ಕಳುಹಿಸಿದೆ ಎಂದು ವರದಿಯಾಗಿದೆ.
ಈ ಸುದ್ದಿ ಭಾನುವಾರ ಹೊರಬಿದ್ದ ಬಳಿಕ ತೃಣಮೂಲ ಕಾಂಗ್ರೆಸ್ ಆರಂಭದಲ್ಲಿ ಅದನ್ನು ತಳ್ಳಿಹಾಕಲು ಯತ್ನಿಸಿತು. ಐ-ಪಿಎಸಿ ಕೆಲಸ ನಿಲ್ಲಿಸಿಲ್ಲ, ಇದು ಸುಳ್ಳು ಸುದ್ದಿ ಎಂದು ಪಕ್ಷದ ನಾಯಕರು ಸ್ಪಷ್ಟನೆ ನೀಡಿದ್ದರು. ಆದರೆ ಬಳಿಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಐ-ಪಿಎಸಿ ನಿಜವಾಗಿಯೂ ತಾತ್ಕಾಲಿಕವಾಗಿ ಕಾರ್ಯಾಚರಣೆಯನ್ನು ನಿಲ್ಲಿಸಿದೆ ಎಂದು ಒಪ್ಪಿಕೊಂಡಿದ್ದಾರೆ.
ಐ-ಪಿಎಸಿ ಹಿಂಪಡೆಯುತ್ತಿರುವ ಹಿನ್ನೆಲೆ ಚುನಾವಣಾ ಪ್ರಚಾರ ಮತ್ತು ಮತದಾನ ನಿರ್ವಹಣೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ತೃಣಮೂಲ ಕಾಂಗ್ರೆಸ್ ಈಗಾಗಲೇ ಪರ್ಯಾಯ ತಂಡವನ್ನು ಕಣಕ್ಕಿಳಿಸಿದೆ. ಅಭಿಷೇಕ್ ಬ್ಯಾನರ್ಜಿ ಕಚೇರಿಯಿಂದ ಕಾರ್ಯನಿರ್ವಹಿಸುತ್ತಿದ್ದ ವೃತ್ತಿಪರ ತಂಡಕ್ಕೆ ಈಗ ಹೆಚ್ಚಿನ ಹೊಣೆಗಾರಿಕೆ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ತಂಡವು ಈಗಾಗಲೇ ಹಲವು ಜಿಲ್ಲೆಗಳಲ್ಲಿ ಸಕ್ರಿಯವಾಗಿದ್ದು, ಪ್ರಚಾರ ಕಾರ್ಯ, ಮತಗಟ್ಟೆ ನಿರ್ವಹಣೆ, ಮತದಾನದ ದಿನದ ಮೇಲ್ವಿಚಾರಣೆ ಸೇರಿದಂತೆ ಪ್ರಮುಖ ಕಾರ್ಯಗಳನ್ನು ನಿರ್ವಹಿಸಲಿದೆ. ಮತಗಟ್ಟೆ ಮಟ್ಟದಲ್ಲಿ ವಾಟ್ಸ್ಆ್ಯಪ್ ಗುಂಪುಗಳನ್ನು ರಚಿಸಲಾಗುತ್ತಿದ್ದು, ಮತದಾನದ ಪ್ರಮಾಣ, ಮತಯಂತ್ರ ಮುಚ್ಚುವ ಸಮಯ ಹಾಗೂ ಸ್ಥಳೀಯ ಪರಿಸ್ಥಿತಿಯ ಮಾಹಿತಿ ತಕ್ಷಣವೇ ಹಂಚಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
ಐ-ಪಿಎಸಿ ಉದ್ಯೋಗಿಗಳಲ್ಲಿ ಈ ಬೆಳವಣಿಗೆ ಅನಿಶ್ಚಿತತೆಯ ವಾತಾವರಣವನ್ನು ಸೃಷ್ಟಿಸಿದೆ. ಹಲವು ಜಿಲ್ಲೆಗಳಲ್ಲಿ ಸಿಬ್ಬಂದಿಗೆ ಒದಗಿಸಲಾಗುತ್ತಿದ್ದ ವಾಹನ ವ್ಯವಸ್ಥೆಗಳನ್ನೂ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.
ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ನಮಗಾಗಿ ಕೆಲಸ ಮಾಡುವ ಜನರನ್ನು ಬೆದರಿಸಲಾಗುತ್ತಿದೆ. ಅವರನ್ನು ಕೆಲಸದಿಂದ ತೆಗೆದರೆ, ನಾವು ಅವರಿಗೆ ಉದ್ಯೋಗ ನೀಡುತ್ತೇವೆ. ಒಬ್ಬ ಯುವಕನೂ ನಿರುದ್ಯೋಗಿಯಾಗುವುದಿಲ್ಲ” ಎಂದು ಹೇಳಿದ್ದಾರೆ.
ಇತ್ತೀಚಿನ ತಿಂಗಳುಗಳಲ್ಲಿ ಜಾರಿ ನಿರ್ದೇಶನಾಲಯದ ಕ್ರಮಗಳ ಬಳಿಕ ಐ-ಪಿಎಸಿ ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ಕಾರಣದಿಂದ ಕಾನೂನು ಸಂಬಂಧಿತ ಸಮಸ್ಯೆಗಳ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಕೆಲಸ ಸ್ಥಗಿತಗೊಳಿಸಲಾಗುತ್ತಿದೆ ಎಂದು ಸಂಸ್ಥೆ ತನ್ನ ಇಮೇಲ್ನಲ್ಲಿ ತಿಳಿಸಿದೆ.
ಆದರೆ, ಐ-ಪಿಎಸಿ ಕಾರ್ಯನಿರ್ವಹಿಸದಿದ್ದರೂ ಚುನಾವಣಾ ಪ್ರಚಾರದಲ್ಲಿ ಯಾವುದೇ ಅಡ್ಡಿ ಉಂಟಾಗುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಅಧಿಕೃತವಾಗಿ ಹೇಳಿಕೊಂಡಿದೆ. ಇದಾದರೂ, ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಸಂಸ್ಥೆಯ ಹಿಂತೆಗೆತ ಚುನಾವಣಾ ಲೆಕ್ಕಾಚಾರಗಳ ಮೇಲೆ ಪರಿಣಾಮ ಬೀರಬಹುದು ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa