ಕುಡಿಯುವ ನೀರಿನ ಕೊರತೆ ಎದುರಾಗದಂತೆ ನಿಗಾ ವಹಿಸಲು ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಮನವಿ
ಕುಡಿಯುವ ನೀರಿನ ಕೊರತೆ ಎದುರಾಗದಂತೆ ನಿಗಾ ವಹಿಸಲು ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಮನವಿ
ಕೋಲಾರ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ರವರು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿದರು.


ಕೋಲಾರ, ಏಪ್ರಿಲ್ ೧೩ (ಹಿ.ಸ.) :

ಆ್ಯಂಕರ್ : ಜಿಲ್ಲೆಯಲ್ಲಿ ಬೇಸಿಗೆಯನ್ನು ಸಮರ್ಥವಾಗಿ ಎದುರಿಸಲು ಮತ್ತು ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಅಧಿಕಾರಿಗಳಿಗೆ ತಾಕಿತು ಮಾಡಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

೨೦೨೫ರ ಜನವರಿಯಿಂದ ನವೆಂಬರ್ವರೆಗೆ ಜಿಲ್ಲೆಯಲ್ಲಿ ೭೩೫.೧ ಮಿ.ಮೀ ವಾಡಿಕೆ ಮಳೆಯಾಗಬೇಕಿದ್ದು, ೯೨೭.೦ ಮಿ.ಮೀ ಮಳೆಯಾಗಿದೆ (ಶೇ. ೨೬ ರಷ್ಟು ಹೆಚ್ಚುವರಿ). ೨೦೨೬ರ ಜನವರಿಯಿಂದ ಏಪ್ರಿಲ್ ೧೨ರವರೆಗೆ ೨೪.೬ ಮಿ.ಮೀ ವಾಡಿಕೆ ಮಳೆಗೆ ಬದಲಾಗಿ ೨೬.೦ ಮಿ.ಮೀ ಮಳೆಯಾಗಿದೆ. ಜಿಲ್ಲೆಯ ಸರಾಸರಿ ಅಂತರ್ಜಲ ಮಟ್ಟವು ಸುಧಾರಿಸಿದ್ದು, ೨೦೧೯ ರಲ್ಲಿ ೭೭.೦೬ ಮೀಟರ್ಗಳಷ್ಟಿದ್ದ ಆಳವು ೨೦೨೫ ರ ವೇಳೆಗೆ ೩೭.೫೨ ಮೀಟರ್ಗಳಿಗೆ ತಲುಪಿದೆ ಎಂದರು. ಮುಂದಿನ ೩ ತಿಂಗಳಲ್ಲಿ ಜಿಲ್ಲೆಯ ೨೩೯ ಗ್ರಾಮಗಳು ಮತ್ತು ೫೨ ನಗರ ವಾರ್ಡ್ಗಳಲ್ಲಿ ನೀರಿನ ಕೊರತೆ ಉಂಟಾಗುವ ಸಾಧ್ಯತೆಯನ್ನು ಗುರುತಿಸಲಾಗಿದೆ ಎಂದು ಅವರು ತಿಳಿಸಿದರು.

ಮುಂಜಾಗ್ರತಾ ಕ್ರಮವಾಗಿ ಗ್ರಾಮೀಣ ಭಾಗದಲ್ಲಿ ೭೦ ಮತ್ತು ನಗರ ಪ್ರದೇಶದಲ್ಲಿ ೨೪ ಹೆಚ್ಚಿನ ಇಳುವರಿ ನೀಡುವ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದೆ. ಪ್ರಸ್ತುತ ಬಂಗಾರಪೇಟೆ, ಕೆ.ಜಿ.ಎಫ್ ಮತ್ತು ಮಾಲೂರು ತಾಲ್ಲೂಕುಗಳ ೧೫ ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ವೈಜ್ಞಾನಿಕ ದರ ನಿಗದಿಪಡಿಸುವಂತೆ ಜಿಲ್ಲಾಧಿಕಾರಿಗಳು ಆಯಾ ತಹಶೀಲ್ದಾರ್ಗಳಿಗೆ ಸೂಚಿಸಿದರು.

ಯರಗೋಳ್ ಜಲಾಶಯದಿಂದ ಕೋಲಾರ, ಮಾಲೂರು ಮತ್ತು ಬಂಗಾರಪೇಟೆ ನಗರಸಭೆಗಳ ವಿವಿಧ ವಾರ್ಡ್ಗಳಿಗೆ ಪ್ರತಿನಿತ್ಯ ನೀರು ಪೂರೈಸಲಾಗುತ್ತಿದ್ದು, ಜಲಾಶಯದಲ್ಲಿ ಪ್ರಸ್ತುತ ೧೮೬ ಎಂಸಿಎಫ್ಟಿ ನೀರು ಲಭ್ಯವಿದೆ ಇದು ಈಬಾರಿ ಬೇಸಿಗೆಗೆ ಸಾಕಷ್ಟು ದಾಸ್ತಾನು ಇದೆ. ಜಿಲ್ಲೆಯಲ್ಲಿ ಪ್ರಸ್ತುತ ೨,೭೬,೪೩೨ ಟನ್ ಮೇವು ಲಭ್ಯವಿದ್ದು, ಇದು ಮುಂದಿನ ೨೩ ವಾರಗಳಿಗೆ ಸಾಕಾಗಲಿದೆ.

ಜಾನುವಾರುಗಳ ಕುಡಿಯುವ ನೀರಿಗಾಗಿ ಜಿಲ್ಲೆಯಾದ್ಯಂತ ಒಟ್ಟು ೧,೩೧೬ ನೀರಿನ ತೊಟ್ಟಿಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಶಾಖ ತರಂಗ ಕ್ರಿಯಾ ಯೋಜನೆ-೨೦೨೬ ರನ್ವಯ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸೂಚಿಸಿದರು.

ಜಿಲ್ಲೆಯ ಎಲ್ಲಾ ತಾಲ್ಲೂಕಿನ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳು, ಐವಿ ಫ್ಲೂಯಿಡ್ಸ್ ಮತ್ತು ಓಆರ್ಎಸ್ ದಾಸ್ತಾನು ಇರುವಂತೆ ನೋಡಿಕೊಳ್ಳಲು ಸಂಬ0ಧಿಸಿದ ಅಧಿಕಾರಿಗಳಿಗೆ ತಿಳಿಸಿದರು. ಬಿಸಿಲಿನ ತೀವ್ರತೆ ಹೆಚ್ಚಿರುವ ಅವಧಿಯಲ್ಲಿ ನರೇಗಾ ಕೆಲಸದ ಸಮಯವನ್ನು ಬದಲಾಯಿಸಲು ಸೂಚನೆ ನೀಡಲಾಗಿದೆ.

ಮಾರ್ಚ್ ೧೮ ರಿಂದ ಏಪ್ರಿಲ್ ೬ ರವರೆಗೆ ಉಂಟಾದ ಆಲಿಕಲ್ಲು ಮಳೆಯಿಂದಾಗಿ ಸುಮಾರು ೩೭.೫೦ ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಈ ಸಂಬAಧ ೪೦ ರೈತರಿಗೆ ಪರಿಹಾರ ನೀಡಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳ ಮತ್ತು ತಹಶೀಲ್ದಾರ್ಗಳ ಪಿ.ಡಿ ಖಾತೆಯಲ್ಲಿ ಒಟ್ಟು ೧,೨೪೦.೨೪ ಲಕ್ಷ ರೂ. ಎಸ್ಡಿಆರ್ಎಫ್ ಅನುದಾನ ಲಭ್ಯವಿದೆ. ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸದ ಮತ್ತು ಕುಡಿಯುವ ನೀರಿನ ಪೂರೈಕೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್. ಪಿ. ಬಾಗೇವಾಡಿ, ಜಿಲ್ಲಾಧಿಕಾರಿ ಪೊಲೀಸ್ ವರಿಷ್ಟಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಅಪರ ಜಿಲ್ಲಾಧಿಕಾರಿ ಎಸ್. ಎಂ. ಮಂಗಳ, ಎಲ್ಲಾ ತಹಸೀಲ್ದಾರ್ಗಳು, ಎಲ್ಲಾ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹನಾಧಿಕಾರಿಗಳು, ತೋಟಗಾರಿಕೆ ಉಪನಿರ್ದೇಶಕ ಕುಮಾರಸ್ವಾಮಿ, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ರಮೇಶ್, ಆರ್ ಸಿ ಹೆಚ್ ಅಧಿಕಾರಿ ಡಾ. ಚಾರಿಣಿ, ಜಿಲ್ಲಾ ಭುವಿಜ್ಞಾನಿ ತಿಪ್ಪೆಸ್ವಾಮಿ ಭಾಗಿಯಾಗಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande