
ಮುಂಬಯಿ, 12 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಭಾರತೀಯ ಚಿತ್ರರಂಗದ ದಿಗ್ಗಜ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರು ಭಾನುವಾರ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದರು. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ.
ಶನಿವಾರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಆಯಾಸ ಹಾಗೂ ಎದೆ ಸೋಂಕಿನ ಸಮಸ್ಯೆಯಿಂದ ಅವರು ತುರ್ತು ವೈದ್ಯಕೀಯ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಪುತ್ರ ಆನಂದ್ ಭೋಸಲೆ ಈ ದುಃಖದ ಸುದ್ದಿಯನ್ನು ದೃಢಪಡಿಸಿದ್ದಾರೆ.
ಅವರ ಆರೋಗ್ಯ ಚೇತರಿಕೆಗೆ ದೇಶ-ವಿದೇಶದ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದರು. ಆದರೆ ಸಂಗೀತ ಲೋಕದ ಈ ಅಮೂಲ್ಯ ಧ್ವನಿ ಇಂದು ಮೌನವಾಗಿದ್ದು, ಅಭಿಮಾನಿಗಳಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.
ಕುಟುಂಬದ ಮಾಹಿತಿ ಪ್ರಕಾರ, ಸೋಮವಾರ ಅಂತ್ಯಕ್ರಿಯೆಗಳು ನಡೆಯಲಿವೆ. ಬೆಳಿಗ್ಗೆ 11 ಗಂಟೆಗೆ ಲೋವರ್ ಪರೇಲ್ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು. ಬಳಿಕ ಸಂಜೆ 4 ಗಂಟೆಗೆ ಮುಂಬೈನ ಶಿವಾಜಿ ಪಾರ್ಕನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಇದೇ ಸ್ಥಳದಲ್ಲಿ ಅವರ ಸಹೋದರಿ, ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆಯೂ ನಡೆದಿತ್ತು.
1933ರ ಸೆಪ್ಟೆಂಬರ್ 8ರಂದು ಜನಿಸಿದ ಆಶಾ ಭೋಂಸ್ಲೆ, ಏಳು ದಶಕಗಳಿಗೂ ಅಧಿಕ ಕಾಲದ ತಮ್ಮ ಸಂಗೀತ ಪಯಣದಲ್ಲಿ ಸಾವಿರಾರು ಹಾಡುಗಳಿಗೆ ಧ್ವನಿ ನೀಡಿದ್ದರು. ಅವರ ತಂದೆ ದಿನಾನಾಥ್ ಮಂಗೇಶ್ಕರ್ ಕೂಡ ಖ್ಯಾತ ಗಾಯಕ-ನಟರಾಗಿದ್ದರು. ಬಾಲ್ಯದಲ್ಲೇ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟ ಅವರು ಮರಾಠಿ ಚಿತ್ರರಂಗದಿಂದ ಆರಂಭಿಸಿ, ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲೂ ಅಪಾರ ಸಾಧನೆ ಮಾಡಿದರು.
ಅವರ ನಿಧನದಿಂದ ಭಾರತೀಯ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದ್ದು, ದೇಶದಾದ್ಯಂತ ಸಂತಾಪದ ಅಲೆ ವ್ಯಕ್ತವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa