ನಾರಿ ಶಕ್ತಿ ಅಧಿನಿಯಮ ಜಾರಿಗೆ ವಿಳಂಬ ; ವಿಶೇಷ ಅಧಿವೇಶನಕ್ಕೆ ಖರ್ಗೆ ಆಕ್ಷೇಪ
ನವದೆಹಲಿ, 12 ಏಪ್ರಿಲ್ (ಹಿ.ಸ.) : ಆ್ಯಂಕರ್ : ಏಪ್ರಿಲ್ 16ರಿಂದ ನಾರಿ ಶಕ್ತಿ ವಂದನ ಅಧಿನಿಯಮದ ಕುರಿತು ಚರ್ಚೆ ನಡೆಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆದಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಪ್ರತಿಕ್ರಿಯೆ ವ್ಯಕ್ತ
Kharge  letter


ನವದೆಹಲಿ, 12 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಏಪ್ರಿಲ್ 16ರಿಂದ ನಾರಿ ಶಕ್ತಿ ವಂದನ ಅಧಿನಿಯಮದ ಕುರಿತು ಚರ್ಚೆ ನಡೆಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆದಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ತಮ್ಮ ಹೇಳಿಕೆಯನ್ನು ಹಂಚಿಕೊಂಡಿರುವ ಖರ್ಗೆ, “ನಾರಿ ಶಕ್ತಿ ವಂದನ ಅಧಿನಿಯಮ, 2023 ಅನ್ನು ಸಂಸತ್ತು 2023ರ ಸೆಪ್ಟೆಂಬರ್ನಲ್ಲಿ ಸರ್ವಾನುಮತದಿಂದ ಅಂಗೀಕರಿಸಿತು. ಆಗಲೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪರವಾಗಿ ಈ ಕಾನೂನು ತಕ್ಷಣ ಜಾರಿಗೆ ಬರಬೇಕು ಎಂದು ನಾವು ಒತ್ತಾಯಿಸಿದ್ದೆವು. ಆದರೆ, 30 ತಿಂಗಳುಗಳು ಕಳೆದರೂ ಸರ್ಕಾರ ಅದನ್ನು ಜಾರಿಗೆ ತರದೇ ಇರುವುದೇ ಆಶ್ಚರ್ಯಕರ” ಎಂದು ತಿಳಿಸಿದ್ದಾರೆ.

ಇದಲ್ಲದೆ, “ಈಗ ವಿಶೇಷ ಅಧಿವೇಶನವನ್ನು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕರೆಯಲಾಗಿದ್ದು, ಗಡಿ ನಿರ್ಣಯ ಸೇರಿದಂತೆ ಪ್ರಮುಖ ಅಂಶಗಳ ಬಗ್ಗೆ ಯಾವುದೇ ಸ್ಪಷ್ಟತೆ ನೀಡಿಲ್ಲ. ಈ ಮಾಹಿತಿಯಿಲ್ಲದೆ ಅರ್ಥಪೂರ್ಣ ಚರ್ಚೆ ಸಾಧ್ಯವಿಲ್ಲ” ಎಂದು ಅವರು ಆಕ್ಷೇಪಿಸಿದ್ದಾರೆ.

ಸರ್ಕಾರವು ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ ಎಂಬ ಹೇಳಿಕೆಯನ್ನು ತಳ್ಳಿಹಾಕಿದ ಖರ್ಗೆ, “ಎಲ್ಲಾ ಪ್ರತಿ ಪಕ್ಷಗಳು ಏಪ್ರಿಲ್ 29, 2026ರ ಬಳಿಕ ಸರ್ವಪಕ್ಷ ಸಭೆ ಕರೆಯುವಂತೆ ಆಗ್ರಹಿಸುತ್ತಿವೆ. ಆದರೆ ಸರ್ಕಾರ ಇದನ್ನು ಪರಿಗಣಿಸಿಲ್ಲ” ಎಂದು ಹೇಳಿದ್ದಾರೆ.

ರಾಜ್ಯ ಚುನಾವಣೆಯ ನಡುವೆ ವಿಶೇಷ ಅಧಿವೇಶನ ಕರೆಯುವುದನ್ನು ರಾಜಕೀಯ ಲಾಭದ ಪ್ರಯತ್ನವೆಂದು ಆರೋಪಿಸಿದ ಅವರು, “ಮಹಿಳಾ ಸಬಲೀಕರಣದ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯುವ ಯತ್ನ ನಡೆಯುತ್ತಿದೆ” ಎಂದು ಟೀಕಿಸಿದ್ದಾರೆ.

ನೋಟು ಅಮಾನ್ಯೀಕರಣ, ಜಿಎಸ್ಟಿ ಸೇರಿದಂತೆ ಪ್ರಮುಖ ವಿಷಯಗಳಲ್ಲಿ ಸರ್ಕಾರದ ಹಿಂದಿನ ನಡೆ ವಿಶ್ವಾಸ ಮೂಡಿಸುವಂತಿಲ್ಲ ಎಂದು ಹೇಳಿದ ಖರ್ಗೆ, “ಸಾಂವಿಧಾನಿಕ ತಿದ್ದುಪಡಿಗಳು ಕೇಂದ್ರ ಮತ್ತು ರಾಜ್ಯಗಳೆರಡರ ಮೇಲೂ ಪರಿಣಾಮ ಬೀರುವುದರಿಂದ, ಎಲ್ಲ ಪಕ್ಷಗಳು ಹಾಗೂ ರಾಜ್ಯಗಳ ಅಭಿಪ್ರಾಯಗಳನ್ನು ಕೇಳುವುದು ಅಗತ್ಯ” ಎಂದು ಅಭಿಪ್ರಾಯಪಟ್ಟರು.

“ಪ್ರಜಾಪ್ರಭುತ್ವವನ್ನು ಬಲಪಡಿಸುವ ಉದ್ದೇಶವೇ ಇದ್ದರೆ, ಏಪ್ರಿಲ್ 29ರ ಬಳಿಕ ಗಡಿ ನಿರ್ಣಯ ಸೇರಿದಂತೆ ಸಂಬಂಧಿತ ವಿಷಯಗಳ ಕುರಿತು ಸರ್ವಪಕ್ಷ ಸಭೆ ಕರೆಯಬೇಕು” ಎಂದು ಖರ್ಗೆ ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande