
ಬಾಗಲಕೋಟೆ, 01 ಏಪ್ರಿಲ್ (ಹಿ.ಸ.) :
ಆ್ಯಂಕರ್ : ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಬಡವರ ಮನೆಗಳಿಗೆ ಪ್ರಾಮಾಣಿಕವಾಗಿ ತಲುಪಿದೆಯೇ ಎಂಬುದನ್ನು ಕಾಂಗ್ರೆಸ್ ಕಾರ್ಯಕರ್ತರು ಸಮೀಕ್ಷೆ ಮೂಲಕ ಪರಿಶೀಲನೆ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಬಾಗಲಕೋಟೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಪ್ರಯೋಜನ ಪಡೆದ ಫಲಾನುಭವಿಗಳು “ನಿಮ್ಮ ಉಪಕಾರವನ್ನು ನಾವು ತೀರಿಸುತ್ತೇವೆ” ಎಂದು ಕಾರ್ಯಕರ್ತರ ಎದುರು ಹೇಳುತ್ತಿರುವುದು ಕೇಳಿ ಬರುತ್ತಿದೆ. ಈ ಪ್ರತಿಕ್ರಿಯೆ ಕಾಂಗ್ರೆಸ್ ಸರ್ಕಾರದ ಎಲ್ಲರಿಗೂ ಸಂತೋಷ ತಂದಿದ್ದು, ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡಲು ಪ್ರೇರಣೆ ನೀಡಿದೆ ಎಂದು ಹೇಳಿದರು.
ಇದೇ ವೇಳೆ ಮುಂದಿನ ಉಪಚುನಾವಣೆಗಳಲ್ಲಿಯೂ ಹಾಗೂ ಮುಂದೆಯೂ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವುದಾಗಿ ಜನರು ಒಕ್ಕೊರಲಿನಿಂದ ಹೇಳುತ್ತಿರುವುದು ಸ್ವಾಗತಾರ್ಹ ವಿಷಯವಾಗಿದೆ ಎಂದು ಅವರು ಹೇಳಿದರು.
ಆದರೆ ಈ ವಿಷಯವನ್ನು ಬಿಜೆಪಿ ನಾಯಕರು ಟೀಕೆ ಮಾಡುತ್ತಿರುವುದಕ್ಕೆ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಜನರಿಗೆ ತಲುಪಿದ ಯೋಜನೆಗಳ ಬಗ್ಗೆ ಬಿಜೆಪಿ ತಪ್ಪು ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande