
ಬಾಗಲಕೋಟೆ, 01 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಎರಡೆರಡು ಕಡೆ ಮತದಾನದ ಹಕ್ಕನ್ನು ಹೊಂದಿರುವ ಬೇರೆ ಪ್ರದೇಶದ ವಿದ್ಯಾರ್ಥಿಗಳು ಇಲ್ಲಿ ಮತ ಚಲಾಯಿಸದಿದ್ದರೆ ಫೇಲ್ ಮಾಡುತ್ತೇವೆ ಎಂದು ಹೇಳಿ ವಿದ್ಯಾರ್ಥಿಗಳನ್ನು ಬಿಜೆಪಿ ನಾಯಕರು ಬೆದರಿಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದರು.
ಬಾಗಲಕೋಟೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಚುನಾವಣೆ ಹಿನ್ನೆಲೆ ಬಿಜೆಪಿ ಪಕ್ಷ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುವ ಮೂಲಕ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ಟೀಕಿಸಿದರು.
ವಿದ್ಯಾರ್ಥಿಗಳನ್ನು ಮತದಾನಕ್ಕೆ ಒತ್ತಾಯಿಸುವುದು ಹಾಗೂ ಬೆದರಿಕೆ ಹಾಕುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ನಡೆ ಎಂದು ಹೇಳಿದರು. ಯಾವುದೇ ವ್ಯಕ್ತಿಯೂ ಮತದಾನ ಮಾಡುವುದೇ ಅಥವಾ ಬೇಡವೇ ಎಂಬುದು ಅವರ ಸ್ವಂತ ಹಕ್ಕು. ವಿದ್ಯಾರ್ಥಿಗಳನ್ನು ಭಯಭೀತಗೊಳಿಸುವುದು ಸರಿಯಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಬಾಗಲಕೋಟೆ ಉಪಚುನಾವಣೆ ಸಂದರ್ಭದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ ಎಂದು ಅವರು ಅಭಿಪ್ರಾಯಪಟ್ಟರು.
ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಸುಮ್ಮನೆ ಕೂರುವುದಿಲ್ಲ, ಬದಲಿಗೆ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ನಮ್ಮ ತಂಡದ ಪ್ರಮುಖರಿಗೆ ತಿಳಿಸಲಾಗಿದ್ದು, ಕೂಡಲೇ ಈ ಕೃತ್ಯ ಎಸಗುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಜೊತೆಗೆ ವಿದ್ಯಾರ್ಥಿಗಳ ಜೊತೆಗೆ ಈ ವಿಚಾರವಾಗಿ ಅರಿವು ಮೂಡಿಸುವ ಧೈರ್ಯ ಹೇಳುವ ಕೆಲಸ ಕಾಂಗ್ರೆಸ್ ಮಾಡಲಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande