
ಬೆಂಗಳೂರು, 07 ಮಾರ್ಚ್ (ಹಿ.ಸ.):
ಆ್ಯಂಕರ್:
ಸೈಬರ್ ಅಪರಾಧಗಳ ತನಿಖೆ ಮತ್ತು ಡಿಜಿಟಲ್ ಪುರಾವೆಗಳ ಸಂಗ್ರಹಣೆಗೆ ಸಂಬಂಧಿಸಿದಂತೆ ಜಾಗೃತಿ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ವೃದ್ಧಿಸಲು ಆಯೋಜಿಸಲಾದ ‘ಸಿಡೆಕೋಡ್’ ಮೂರನೇ ವರ್ಷದ ಸೈಬರ್ ಅಪರಾಧ ತನಿಖಾ ಶೃಂಗಸಭೆಯನ್ನು ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಉದ್ಘಾಟಿಸಿದರು.
ಈ ಶೃಂಗಸಭೆಯನ್ನು ಸಿಐಡಿ ಸೈಬರ್ ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಸೈಬರ್ ಅಪರಾಧಗಳನ್ನು ಪರಿಣಾಮಕಾರಿಯಾಗಿ ತನಿಖೆ ಮಾಡಲು ಅಗತ್ಯವಾದ ಕೌಶಲ್ಯ, ತರಬೇತಿ ಮತ್ತು ತಂತ್ರಜ್ಞಾನಗಳೊಂದಿಗೆ ವಿಶೇಷ ಸೈಬರ್ ಅಪರಾಧ ಘಟಕಗಳನ್ನು ಸ್ಥಾಪಿಸುವ ಮೂಲಕ ಕರ್ನಾಟಕ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.
ರಾಜ್ಯದ ಎಲ್ಲ ಜಿಲ್ಲೆಗಳು ಹಾಗೂ ಪ್ರಮುಖ ನಗರಗಳಲ್ಲಿ ಒಟ್ಟು 43 ಸಿಇಎನ್ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದ್ದು, ನಾಗರಿಕರಿಗೆ ಸೈಬರ್ ಸುರಕ್ಷತೆ ಒದಗಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಸಿಐಡಿ ಸೈಬರ್ ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆಯಿಂದ ಸೈಬರ್ ಅಪರಾಧ ತನಿಖೆ ಮತ್ತಷ್ಟು ಬಲವಾಗಿದ್ದು, ಸಂಶೋಧನಾ ಸಾಮರ್ಥ್ಯ ವೃದ್ಧಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸುಧಾರಿತ ತಾಂತ್ರಿಕ ಕೌಶಲ್ಯಗಳನ್ನು ಒದಗಿಸುವಲ್ಲಿ ಈ ಕೇಂದ್ರ ಪ್ರಮುಖ ಪಾತ್ರವಹಿಸುತ್ತಿದೆ ಎಂದು ಸಚಿವರು ಹೇಳಿದರು.
ಈ ಕೇಂದ್ರದಿಂದ ಹೊರಹೊಮ್ಮುತ್ತಿರುವ ಸಂಶೋಧನಾ ಪ್ರಕಟಣೆಗಳು ಹಾಗೂ ಸಾಮರ್ಥ್ಯವರ್ಧನಾ ಕಾರ್ಯಕ್ರಮಗಳು ರಾಜ್ಯದ ಸೈಬರ್ ಪೊಲೀಸ್ ವ್ಯವಸ್ಥೆಗೆ ಅರ್ಥಪೂರ್ಣ ಕೊಡುಗೆಯನ್ನು ನೀಡುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ, ಸೈಬರ್ ಕಮಾಂಡ್ ಡಿಜಿಪಿ ಪ್ರಣವ್ ಮೊಹಂತಿ, ಇನ್ಫೋಸಿಸ್ ಫೌಂಡೇಶನ್ ಟ್ರಸ್ಟಿ ಸುನೀಲ್ ಕುಮಾರ್ ಧಾರೇಶ್ವರ್, ಭಾರತದ ದತ್ತಾಂಶ ಭದ್ರತಾ ಮಂಡಳಿ ಸಿಇಒ ವಿನಾಯಕ ಗೋಡ್ಸೆ ಸೇರಿದಂತೆ ಹಲವರು ಉಪಸ್ಥಿತರಿದ್ದರು
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa