
ಕೊಪ್ಪಳ, 07 ಮಾರ್ಚ್ (ಹಿ.ಸ.)
ಆ್ಯಂಕರ್: ಬಜೆಟ್ ನಲ್ಲಿ ನಮ್ಮ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ಮೂಲಕ ಸತತವಾಗಿ ಮೂರನೇ ವರ್ಷವೂ ಕೊಪ್ಪಳಕ್ಕೆ ಸಿದ್ದರಾಮಯ್ಯನವರ ಸರಕಾರ ಚೂಂಬು ಕೊಟ್ಟಿದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಟೀಕಿಸಿದ್ದಾರೆ.
'ಶುದ್ಧ ಕುಡಿಯುವ ನೀರು ಪೂರೈಕೆ, ಕೆರೆಗಳ ಆಧುನಿಕರಣ, ಆಣೆಕಟ್ಟು ಮತ್ತು ಪಿಕ್ ಅಪ್ ಹಾಗೂ ಚೆಕ್ ಡ್ಯಾಮ್ ನಿರ್ಮಾಣ ಕಾಮಗಾರಿಗಳಿಗೆ ಯಲಬುರ್ಗಾ ಕ್ಷೇತ್ರಕ್ಕೆ ಅನುದಾನದ ಹೊಳೆ ಹರಿದಿದೆ. ಇದರಲ್ಲಿ ಕೊಪ್ಪಳಕ್ಕೆ ಬಿಡಿಗಾಸೂ ಇಲ್ಲ. ಹೋದ ವರ್ಷ ಆದ ಅನ್ಯಾಯ ಈ ವರ್ಷವೂ ಮುಂದುವರೆದಿದೆ. ಇದಕ್ಕೆ ಶಾಸಕರ ನಿರ್ಲಕ್ಷವೇ ಕಾರಣ,' ಎಂದು ಆರೋಪಿಸಿದ್ದಾರೆ.
ಮುನಿರಾಬಾದ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರದ ಸ್ಥಾಪನೆ ಹಾಗೂ ಕೊಪ್ಪಳದ ಇಎಸ್ಐ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಕೆಲಸಗಳಿಗೆ ಮೀಸಲಿಡುವ ಹಣ ಎಷ್ಟು ಎಂಬುದು ಪ್ರಸ್ತಾಪವಾಗಿಲ್ಲ. ಕಳೆದ ವರ್ಷ ಆರೋಗ್ಯ ಕ್ಷೇತ್ರಕ್ಕೆ ನೂರಾರು ಕೋಟಿ ಕೊಡುವ ವಾಗ್ದಾನ ಮಾಡಿ ಅದನ್ನು ಈಡೇರಿಸಲಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಶಾಸಕರು ಬಹಿರಂಗಪಡಿಸಬೇಕು. ಬಜೆಟ್ ನಲ್ಲಿ ಪ್ರಸ್ತಾಪಿಸಲ್ಪಟ್ಟ ಈ ಎರಡೂ ಯೋಜನೆಗಳು ಆರಂಭವಾಗುವುದು ಅನುಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳನ್ನು ಸಂಪೂರ್ಣವಾಗಿ ಸಿದ್ದರಾಮಯ್ಯನವರು ನಿರ್ಲಕ್ಷಿಸಿದ್ದಾರೆ. ಆರ್ಥಿಕ ಆಶಿಸ್ತನ್ನು ಉತ್ತೇಜಿಸುವ, ಸಾಲ ಮಾಡಿ ಸರಕಾರ ನಡೆಸುವ ಯೋಜನೆಯ ಬಜೆಟ್ ಈ ರಾಜ್ಯದ ಇತಿಹಾಸದಲ್ಲಿಯೇ ಪ್ರಥಮ ಸಲ ಮಂಡನೆಯಾಗಿದೆ. ಸುಮಾರು 1.32 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿ, 25 ಸಾವಿರ ಕೋಟಿ ರೂಪಾಯಿ ಹೊಸ ತೆರಿಗೆ ಹಾಕಿ, 22 ಸಾವಿರ ಕೋಟಿ ರೂಪಾಯಿ ಕೊರತೆ ಬಜೆಟ್ ಮಂಡನೆಯಾಗಿದೆ. ಪ್ರಸ್ತುತ ಆರ್ಥಿಕ ಅಶಿಸ್ತು ರಾಜದ ಹಣಕಾಸಿನ ಮೇಲೆ ಬಹಳ ದೊಡ್ಡ ಪರಿಣಾಮ ಬೀರಿ ರಾಜ್ಯವನ್ನು ಎರಡು ದಶಕಗಳಷ್ಟು ಹಿಂದೆ ಒಯ್ಯಲಿದೆ,' ಎಂದು ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್