
ಕೊಪ್ಪಳ, 07 ಮಾರ್ಚ್ (ಹಿ.ಸ.)
ಆ್ಯಂಕರ್ : ಸಮಾಜ ಕಲ್ಯಾಣ ಇಲಾಖೆಯಿಂದ ಡಾ. ಬಾಬು ಜಗಜೀವನರಾಂ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆಯ ಅವಧಿಯನ್ನು ಮಾರ್ಚ್ 15ರ ವರೆಗೆ ವಿಸ್ತರಿಸಲಾಗಿದೆ ಎಂದು ಕೊಪ್ಪಳ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರತಿ ವರ್ಷ ಏಪ್ರಿಲ್ 5 ರಂದು ಡಾ. ಬಾಬು ಜಗಜೀವನ್ ರಾಂ ರವರ ಹಾಗೂ ಏಪ್ರಿಲ್ 14 ರಂದು ಡಾ. ಬಿ.ಆರ್. ಅಂಬೇಡ್ಕರ್ ರವರ ಜನ್ಮ ದಿನಾಚರಣೆಯನ್ನು ರಾಜ್ಯ ಮಟ್ಟದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅದರಂತೆ 2026-27ನೇ ಸಾಲಿನಲ್ಲೂ ಏ. 5ಕ್ಕೆ ಡಾ. ಬಾಬು ಜಗಜೀವನ್ ರಾಂ ರವರ 119ನೇ ಜನ್ಮ ದಿನಾಚರಣೆ ಮತ್ತು ಏ. 14ಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ರವರ 135ನೇ ಜನ್ಮ ದಿನಾಚರಣೆಯನ್ನು ರಾಜ್ಯ ಮಟ್ಟದಲ್ಲಿ ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ವರ್ಗದ ಜನಾಂಗದವರ ಶ್ರೇಯಸ್ಸಿಗಾಗಿ ಪ್ರೋತ್ಸಾಯಿಸಿ, ಶ್ರಮಿಸಿ, ಗಣನೀಯ ಸೇವೆ ಸಲ್ಲಿಸಿದ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲು, ಮಾರ್ಚ್ 10 ರೊಳಗಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಈ ಅವಧಿಯನ್ನು ಮಾ. 15 ರವರೆಗೆ ವಿಸ್ತರಿಸಿದ್ದು, ಕೊಪ್ಪಳ ಜಿಲ್ಲೆಯ ಅರ್ಹರು, ತಮ್ಮ ಅರ್ಜಿಯನ್ನು ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಕೊಪ್ಪಳ ಮತ್ತು ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಕೊಪ್ಪಳ, ಯಲಬುರ್ಗಾ, ಕುಷ್ಟಗಿ ಅಥವಾ ಗಂಗಾವತಿ ರವರಿಗೆ ಕಛೇರಿಗೆ ಸಮಯದಲ್ಲಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಪ್ರಸ್ತುತ ಅವಧಿಯ ವಿಸ್ತರಣೆಯಲ್ಲಿ ನಿಗದಿ ಪಡಿಸಿದ ಕೊನೆಯ ದಿನಾಂಕದ ನಂತರ ಯಾವುದೇ ಅರ್ಜಿ ಸ್ವೀಕರಿಸಲಾಗುವುದಿಲ್ಲ .
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್