

ಕೊಪ್ಪಳ, 06 ಮಾರ್ಚ್ (ಹಿ.ಸ.):
ಆ್ಯಂಕರ್ : ಮಕ್ಕಳ ಪಾಲನಾ ಕೇಂದ್ರಗಳು ಮಕ್ಕಳಿಗೆ ಕೇವಲ ಆಶ್ರಯ ತಾಣಗಳು ಅಲ್ಲ, ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಅವುಗಳು ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ಜಿ ರಾಮತ್ನಾಳ ಹೇಳಿದರು.
ಅವರು ಕೊಪ್ಪಳ ನಗರದ ಹೊಸಪೇಟೆ ರಸ್ತೆಯ ಕಲ್ವಾರಿ ಚಾಪೆಲ್ ಸಂಸ್ಥೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಪಾಲನಾ ಸಂಸ್ಥೆಗಳು, ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಮಕ್ಕಳ ಪಾಲನಾ ಕೇಂದ್ರಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಹಮ್ಮಿಕೊಂಡಿದ್ದ “ಮಕ್ಕಳ ಹಕ್ಕುಗಳು, ಕಾನೂನುಗಳು ಮತ್ತು ಮಕ್ಕಳ ಸುರಕ್ಷತೆ ಕುರಿತು ತರಬೇತಿ ಕಾರ್ಯಕ್ರಮ” ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ರಕ್ಷಣೆಯು ತುರ್ತು ಸೇವೆಯಾಗಿದ್ದು, ಯಾವುದೇ ಸಂದರ್ಭದಲ್ಲಿ, ಯಾರೇ ವ್ಯಕ್ತಿಗಳು ಮಕ್ಕಳನ್ನು ಹಾಜರಪಡಿಸಬಹುದಾಗಿದ್ದು, ತಾವುಗಳು ಮಕ್ಕಳ ಸ್ನೇಹಿಯಾಗಿ ಸಕ್ರೀಯವಾಗಿ ಕಾರ್ಯನಿರ್ವಹಿಸುವುದು ಅತ್ಯವಶ್ಯಕವಾಗಿದೆ. ಮಿಷನ್ ವಾತ್ಸಲ್ಯದ ಮೂಲ ತತ್ವವಾದ “ಯಾವುದೇ ಮಗುವು ಹಿಂದುಳಿಯದಿರಲ್ಲಿ” ಎಂಬ ಮೂಲತತ್ವವನ್ನು ಅರಿತುಕೊಂಡು ಕಾರ್ಯನಿರ್ವಹಿಸುವುದು ಅತ್ಯವಶ್ಯಕವಾಗಿದೆ ಎಂದರು.
ಪಾಲನೆ ಮತ್ತು ಪೋಷಣೆ ಅವಶ್ಯವಿರುವ ಮಕ್ಕಳು ಮತ್ತು ಕಾನೂನಿನೊಡನೆ ಸಂಘರ್ಷದಲ್ಲಿರುವ ಮಕ್ಕಳನ್ನು ಕುಟುಂಬದಲ್ಲಿ ಪುನಃ ಸ್ಥಾಪಿಸಲು ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015ರ ಮೂಲತತ್ವಗಳನ್ನು ಪಾಲಿಸಲೇಬೇಕು. ಈ ಕಾಯ್ದೆಯ ವಿಶೇಷತೆಯೆಂದರೆ ಮಕ್ಕಳನ್ನು ಅವರ ವೈಯಕ್ತಿಕ ನೆಲೆಗಟ್ಟಿನ ಆಧಾರದ ಮೇಲಿಂದ, ಅವರ ಸಾಮಾಜಿಕ, ಆರ್ಥಿಕ, ಭೌತಿಕ ಮತ್ತು ಭೌದ್ದಿಕ ಬೆಳವಣಿಗೆಯಲ್ಲಿ ಸಮಸ್ಯೆಗಳನ್ನು ಅರಿತು, ಅವುಗಳಿಂದ ಮಕ್ಕಳನ್ನು ಹೊರತರಲು ವೈಯಕ್ತಿಕ ಪೋಷಣೆ ಯೋಜನೆಯ ಆಧಾರದ ಮೇಲಿಂದ ಅವರಿಗೆ ಪುನರವಸತಿಯನ್ನು ಕಲ್ಪಿಸುವುದಾಗಿದೆ. ಮಕ್ಕಳು ಅವರ ಕುಟುಂಬದೊAದಿಗೆ ಮರಳಿ ಸೇರ್ಪಡೆಯಾದ ನಂತರವು ಅವರಿಗೆ ಅವಶ್ಯವಿರುವ ಆರ್ಥಿಕ ಸೌಲಭ್ಯಗಳನ್ನು ಒದಗಿಸಲು ವಿವಿಧ ಅವಕಾಶಗಳನ್ನು ಒದಗಿಸಿದೆ. ಜಿಲ್ಲೆಯಲ್ಲಿ ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳು ಇದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅವರುಗಳನ್ನು ಗುರುತಿಸಿ, ಅಗತ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ಸೇತುವೆಗಾರರಾಗಿ, ಸೌಲಭ್ಯಕಾರಕರಾಗಿ ಕಾರ್ಯನಿರ್ವಹಿಸಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಿ ಎಂದು ಹೇಳಿದರು.
ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ಅವರು ಮಾತನಾಡಿ, ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿ-1098 ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಸಹಾಯವಾಣಿಗೆ ಬರುತ್ತಿರುವ ಕರೆಗಳು ಅಧಿಕವಾಗಿದ್ದು, ತಾವುಗಳೆಲ್ಲರೂ ಸಕ್ರೀಯರಾಗಿ ಕಾರ್ಯನಿರ್ವಹಿಸಿ, ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಪಡಿಸಿ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪರುಶುರಾಮ ವ್ಹಾಯ್ ಶೆಟ್ಟೆಪ್ಪನವರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ, ಪೊಲೀಸ್ ಉಪಾಧೀಕ್ಷಕರಾದ ಮುತ್ತಣ್ಣ ಸರವಗೋಳ, ಘಟಕ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ರಮೇಶ ಚಿಣಗಿ ಸೇರಿದಂತೆ ಸರಕಾರಿ ಬಾಲಕರ ಬಾಲಮಂದಿರ, ಬಾಲಕಿಯರ ಬಾಲಮಂದಿರ, ಅಮೂಲ್ಯ ದತ್ತು ಸೇವಾ ಕೇಂದ್ರ, ವಿಸ್ತಾರ ಮತ್ತು ಕಲ್ವಾರಿ ಚಾಪೆಲ್ ಸಂಸ್ಥೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಡಾ. ಕೆ. ರಾಘವೇಂದ್ರ ಭಟ್ ಅವರು ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ನ್ಯಾಯ (ಮಕ್ಕಳ ಪೊಷಣೆ ಮತ್ತು ರಕ್ಷಣೆ) ಕಾಯ್ದೆ-2015ರ ಕುರಿತು ಮತ್ತು ಹರೀಶ ಜೋಗಿ ಅವರು ಮಕ್ಕಳ ಪ್ರಕರಣಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆಯ ಕುರಿತು ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮವನ್ನು ರವಿ ಬಡಿಗೇರ ಸ್ವಾಗತಿಸಿದರು, ಪ್ರತಿಭಾ ನಿರೂಪಿಸಿದರು, ರಮೇಶ ವಂದಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್