
ವಿಜಯಪುರ, 06 ಮಾರ್ಚ್ (ಹಿ.ಸ.)
ಆ್ಯಂಕರ್ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವುದು ಶೇ.೧೦೦ಕ್ಕೆ ಶೇ.೧೦೦ ರಷ್ಟು ಸತ್ಯ ಎಂದು ಸಂಸದ ರಮೇಶ ಜಿಗಜಿಣಗಿ ಭವಿಷ್ಯ ನುಡಿದರು.
ವಿಜಯಪುರ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನರ ಒಲವು ಬಿಜೆಪಿಯ ಮೇಲೆ ಎಂದಿಗೂ ಕಡಿಮೆಯಾಗಿಲ್ಲ. ಆದರೆ ಕಾಂಗ್ರೆಸ್ನವರು ಈ ಹಿಂದಿನ ಚುನಾವಣೆಯಲ್ಲಿ ಜನರನ್ನು ಗ್ಯಾರಂಟಿ ಹೆಸರಿನಲ್ಲಿ ಯಾಮಾರಿಸುವ ಪ್ರಯತ್ನ ಮಾಡಿದರು.
ಆದರೆ ಈಗ ಗ್ಯಾರಂಟಿಗಳನ್ನೇ ಸರಿಯಾಗಿ ನೀಡುತ್ತಿಲ್ಲ. ಕೇವಲ ಕುರ್ಚಿ ಕಾದಾಟದಲ್ಲಿಯೇ ನಿರತವಾಗಿರುವುದು ಜನರಿಗೆ ಬೇಸರ ತರಿಸಿದೆ. ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸುವುದು ನಿಶ್ಚಿತ ಎಂದರು.
ಪಕ್ಷಕ್ಕಾಗಿ ಯಾರು ದುಡಿದಿದ್ದಾರೆ ಯಾರು ದುಡದಿಲ್ಲ ಎನ್ನುವುದು ನನಗೆ ಸೇರಿದಂತೆ ಎಲ್ಲ ಮುಖಂಡರಿಗೂ ಗೊತ್ತಿದೆ. ಕಾರ್ಯಕರ್ತರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಯಾರು ಯಾವ ರೀತಿ ರಾಜಕಾರಣ ಮಾಡಿದ್ದಾರೆ, ಯಾರ ಸೋಲಿಗೆ ಕಾರಣವಾಗಿದ್ದಾರೆ ಎಂಬಿತ್ಯಾದಿ ವಿವರಗಳು ಎಲ್ಲರಿಗೂ ಗೊತ್ತಿವೆ.
ಅದಕ್ಕಾಗಿ ಒಂದೇ ಸಮಾಜ ಎನ್ನುವುದು ಬಿಟ್ಟು ಸಾಮಾಜಿಕವಾಗಿ ಎಲ್ಲರನ್ನು ಕಟ್ಟಿಕೊಂಡು ಹೋಗಬೇಕು. ರಾಜಕಾರಣದಲ್ಲಿ ಒಂದು ಸಮಾಜ ಅಥವಾ ವ್ಯಕ್ತಿಯಿಂದ ನಡೆಯುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಬಂಗಾರ ಹಂಚಿದ ಜಿಲ್ಲೆಯವರು ನಾವು, ಕೆಜಿಗಟ್ಟಲೇ ದೇಶದ ಸುರಕ್ಷತೆಗಾಗಿ ಬಂಗಾರ ಹಂಚಿಕೆ ಮಾಡಿದ ಜಿಲ್ಲೆ ನಮ್ಮದು, ಇಲ್ಲಿ ದೇಶಾಭಿಮಾನ ಉಸಿರಾಗಿಸಿಕೊಂಡ ಬಿಜೆಪಿ ೮ ಸೀಟು ಗೆಲ್ಲುವುದು ಕಷ್ಟವೇ ಎಂದು ಪ್ರಶ್ನಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಕಾರ್ಯಕರ್ತರ ತ್ಯಾಗ ಬಲಿದಾನದಿಂದ ಬಿಜೆಪಿ ಇಂದು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಉತ್ತರ ಕರ್ನಾಟಕ ಭಾಗದಿಂದ ಮೂವರು ನಾಯಕರನ್ನು ಮುಖ್ಯಮಂತ್ರಿ ಮಾಡಿದ್ದೇ ಬಿಜೆಪಿ, ಬಿಜೆಪಿ ಸಮಗ್ರ ಕರ್ನಾಟಕ ಹಾಗೂ ಸಮಗ್ರ ಭಾರತದ ಪ್ರಗತಿಯನ್ನು ಬಯಸುವ ಶ್ರೇಷ್ಠ ಚಿಂತನೆಯ ಪಕ್ಷವಾಗಿದೆ ಎಂದರು. ಜಿ.ಪಂ, ತಾ.ಪಂ, ಗ್ರಾ.ಪಂ ಚುನಾವಣೆ ಹತ್ತಿರ ಬುರತ್ತಿರುವುದರಿಂದ ನಾವು ಸ್ಥಳೀಯವಾಗಿ ಬಲಿಷ್ಠರಾಗಬೇಕು, ಆಗ ಮಾತ್ರ ನಾವು ವಿಧಾನಸಭೆ, ಲೋಕಸಭೆ ಚುನಾವಣೆ ಗೆಲುವು ಸಾಧಿಸಲು ಸಾಧ್ಯ, ಸ್ಥಳೀಯ ಚುನಾವಣೆಗಳಲ್ಲಿ ನಾವು ಗೆಲ್ಲಲೇಬೇಕು. ಸಂಸದರ ಬಿಟ್ಟರೆ ಜಿಲ್ಲೆಯಲ್ಲಿ ನಮ್ಮ ಶಾಸಕರು ಯಾರು ಇಲ್ಲ. ಸರ್ಕಾರವು ಇಲ್ಲ ಹೀಗಾಗಿ ನಾವು ಗ್ರಾ.ಪಂ, ತಾ.ಪಂ, ಜಿ.ಪಂ ಗೆಲ್ಲಲೇಬೇಕು ಅದನು ಸೋತರೆ ನಾವು ಜನರ ಹತ್ತಿರ ಹೋಗಲು ಆಗುವುದೇ ಇಲ್ಲ, ಹೀಗಾಗಿ ಕಾರ್ಯಕರ್ತರು ಈ ವಿಷಯವವನ್ನು ಗಂಭೀರವಾಗಿ ತೆಗೆದುಕೊಂಡು ಪಕ್ಷವನ್ನು ಬಲಪಡಿಸುವ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಕಾರ್ಯಕರ್ತರು ಮನಸ್ಸು ಮಾಡಿದರೆ ಏನೆಲ್ಲ ಮಾಡಲು ಸಾಧ್ಯ, ಬಿಜೆಪಿಗೆ ಸಮರ್ಪಣಾ ಮನೋಭಾವ ಕಾರ್ಯಕರ್ತರ ದೊಡ್ಡ ಪಡೆಯೇ ಇದೆ, ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರು ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಮಾಜಿ ಶಾಸಕರಾದ ರಮೇಶ ಭೂಸನೂರ, , ಸಾವಯವ ಬೀಜ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ, ಮುಖಂಡರಾದ ಕಾಸುಗೌಡ ಬಿರಾದಾರ, ಸಂಜೀವ ಐಹೊಳಿ, ವಿವೇಕಾನಂದ ಡಬ್ಬಿ, ಗೋಪಾಲ ಘಟಕಾಂಬಳೆ, ಸಾಬು ಮಾಶ್ಯಾಳ, ಈರಣ್ಣ ರಾವೂರ, ಮಳುಗೌಡ ಪಾಟೀಲ, ಅನೀಲ ಜಮಾದಾರ, ರಜನಿ ಸಂಬಣ್ಣಿ, ಸ್ವಪ್ನಾ ಕಣಮುಚನಾಳ, ಸಂಜಯ ಪಾಟೀಲ ಕನಮಡಿ, ಉಮೇಶ ಕಾರಜೋಳ, ಡಾ.ಸುರೇಶ ಬಿರಾದಾರ, ವಿಜಯಕುಮಾರ ಕುಡಿಗನೂರ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಎಲ್ಲಾ ಮಂಡಲದ ಅಧ್ಯಕ್ಷರು ಪದಾಧಿಕಾರಿಗಳು ಮಹಾನಗರ ಪಾಲಿಕೆ ಸದಸ್ಯರು ಕಾರ್ಯಕರ್ತರು ಉಪಸ್ಥಿತರಿದ್ದರು
---------------
ಹಿಂದೂಸ್ತಾನ್ ಸಮಾಚಾರ್ / jyothi deshpande