
ಗದಗ, 06 ಮಾರ್ಚ್ (ಹಿ.ಸ.)
ಆ್ಯಂಕರ್:- ರಾಜ್ಯ ಬಜೆಟ್ನಲ್ಲಿ ಸವಿತಾ ಸಮಾಜದ ಆರ್ಥಿಕ ಸಬಲೀಕರಣಕ್ಕಾಗಿ ಸಲೂನ್ ಉದ್ಯಮಕ್ಕೆ 10 ಲಕ್ಷ ರೂಪಾಯಿಗಳ ಸಾಲ ಸೌಲಭ್ಯ ಘೋಷಿಸಿರುವುದು ಸಮಾಜದ ಬದುಕಿನಲ್ಲಿ ಹೊಸ ಆಶಾಭಾವನೆ ಮೂಡಿಸಿದೆ ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ನಲ್ಲಿ ಸಾಂಪ್ರದಾಯಿಕ ಕ್ಷೌರಿಕ ವೃತ್ತಿ ನಡೆಸುತ್ತಿರುವ ಸವಿತಾ ಸಮಾಜದವರ ಆರ್ಥಿಕ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿರುವುದು ಸ್ವಾಗತಾರ್ಹ ಎಂದು ತಿಳಿಸಿದ್ದಾರೆ. ಸವಿತಾ ಸಮಾಜದವರು ತಲೆಮಾರುಗಳಿಂದ ಕ್ಷೌರಿಕ ವೃತ್ತಿಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಪ್ರಭಾವ ಹಾಗೂ ಆಧುನಿಕ ಸಲೂನ್ಗಳ ಪೈಪೋಟಿಯಿಂದ ಸಣ್ಣ ಪ್ರಮಾಣದ ಸಲೂನ್ ನಡೆಸುವವರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಸವಿತಾ ಸಮಾಜದ ಪರವಾಗಿ ಸರ್ಕಾರದ ಗಮನಕ್ಕೆ ಸಮಸ್ಯೆಯನ್ನು ತರಲಾಗಿತ್ತು. ಸಲೂನ್ ಉದ್ಯಮವನ್ನು ಆಧುನಿಕೀಕರಣಗೊಳಿಸಲು ಕನಿಷ್ಠ 5 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಜಿಲ್ಲೆಯ ಹಿರಿಯ ನಾಯಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್ ಕೆ ಪಾಟೀಲ್
ಅವರ ವಿಶೇಷ ಆಸಕ್ತಿ ಮತ್ತು ಸರ್ಕಾರದ ಸಕಾರಾತ್ಮಕ ಧೋರಣೆಯಿಂದಾಗಿ, ಸಮಾಜ ಕೇಳಿದ್ದಕ್ಕಿಂತಲೂ ಎರಡರಷ್ಟು ಅಂದರೆ 10 ಲಕ್ಷ ರೂಪಾಯಿಗಳ ಸಾಲ ಸೌಲಭ್ಯ ಘೋಷಣೆ ಮಾಡಿರುವುದು ಸಂತಸದ ವಿಚಾರವಾಗಿದೆ ಎಂದು ಹಡಪದ ತಿಳಿಸಿದ್ದಾರೆ.
ಈ ನಿರ್ಧಾರವು ಸವಿತಾ ಸಮಾಜದ ಪರಂಪರ ವೃತ್ತಿಗೆ ಹೊಸ ಚೈತನ್ಯ ನೀಡಲಿದ್ದು, ಸಣ್ಣ ಸಲೂನ್ಗಳನ್ನು ಹೈಟೆಕ್ ಸಲೂನ್ಗಳಾಗಿ ರೂಪಿಸುವ ಮೂಲಕ ಯುವಕರಿಗೆ ಉದ್ಯೋಗಾವಕಾಶಗಳೂ ಹೆಚ್ಚಲಿವೆ. ಸಮಾಜದ ಅನೇಕ ಯುವಕರು ಸ್ವಂತ ಉದ್ಯಮ ಆರಂಭಿಸಲು ಇದರಿಂದ ಪ್ರೇರಣೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರವು ಸವಿತಾ ಸಮಾಜದ ಗೌರವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿ ತಾಲೂಕು ಕೇಂದ್ರಗಳಲ್ಲಿ ‘ಸರ್ಕಾರಿ ಸೌಹಾರ್ದ ಸಲೂನ್’ ಗಳನ್ನು ಸ್ಥಾಪಿಸಬೇಕು. ಅಲ್ಲಿನ ಕ್ಷೌರಿಕರನ್ನು ಸರ್ಕಾರಿ ನೌಕರರಂತೆ ಪರಿಗಣಿಸಿ ಅವರಿಗೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವ ಮೂಲಕ ಈ ವೃತ್ತಿಗೆ ಸಾಂವಿಧಾನಿಕ ಭದ್ರತೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಇದಲ್ಲದೆ, 10 ಲಕ್ಷ ರೂಪಾಯಿಗಳ ಸಾಲದ ಯೋಜನೆಯಿಂದ ಬಡ ಕುಟುಂಬಗಳ ಮೇಲೆ ಆರ್ಥಿಕ ಹೊರೆ ಬಾರದಂತೆ ಕನಿಷ್ಠ 5 ಲಕ್ಷ ರೂಪಾಯಿಗಳನ್ನು ಸಬ್ಸಿಡಿ ರೂಪದಲ್ಲಿ ನೀಡಬೇಕು. ಈ ಮೂಲಕ ಸಮಾಜದ ಯುವಕರು ಉದ್ಯಮಶೀಲತೆಯತ್ತ ಮುಖಮಾಡಲು ಪ್ರೇರಣೆ ದೊರೆಯಲಿದೆ ಎಂದು ಅವರು ಸಲಹೆ ನೀಡಿದ್ದಾರೆ.
ಯೋಜನೆ ಕೇವಲ ಘೋಷಣೆಗೆ ಸೀಮಿತವಾಗದೆ ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಸಚಿವ ಎಚ್.ಕೆ. ಪಾಟೀಲ ಅವರ ಮಾರ್ಗದರ್ಶನದಲ್ಲಿ ಗದಗ ಜಿಲ್ಲೆಯಲ್ಲಿ ಮಾದರಿಯಾಗಿ ಕನಿಷ್ಠ 50 ಅರ್ಹ ಫಲಾನುಭವಿಗಳಿಗೆ ಪ್ರತಿವರ್ಷ ಈ ಯೋಜನೆಯ ಲಾಭ ತಲುಪುವಂತೆ ಕ್ರಮ ಕೈಗೊಳ್ಳಬೇಕು. ಇದರಿಂದ ರಾಜ್ಯದ ಸಾವಿರಾರು ಸವಿತಾ ಸಮಾಜದ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸಲು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸವಿತಾ ಸಮಾಜದ ಕುಲಕಸುಬು ಇಂದು ಆಧುನಿಕತೆಯ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ನೀಡಿರುವ ಈ ಬಜೆಟ್ ಪ್ರೋತ್ಸಾಹ ಸಮಾಜದ ಆರ್ಥಿಕ ಕ್ರಾಂತಿಗೆ ಮುನ್ನುಡಿಯಾಗಲಿ ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಆಶಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP