

ಕೊಪ್ಪಳ , 06 ಮಾರ್ಚ್ (ಹಿ.ಸ.):
ಆ್ಯಂಕರ್ : ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆಯನ್ವಯ ಜಿಲ್ಲೆಯ ಎಲ್ಲ ಸ್ಕ್ಯಾನಿಂಗ್ ಕೇಂದ್ರಗಳಿಗೆ
ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜು ಟಿ. ಅವರು ಹೇಳಿದ್ದಾರೆ.
ಶುಕ್ರವಾರದಂದು ಪಿ.ಸಿ & ಪಿ.ಎನ್.ಡಿ.ಟಿ ಕಾಯ್ದೆ ಅನುಷ್ಠಾನದ ಸಂಬಂಧವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಾಲಯದಲ್ಲಿ ಕರೆಯಲಾಗಿದ್ದ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಿ.ಸಿ & ಪಿ.ಎನ್.ಡಿ.ಟಿ ಕಾಯ್ದೆ ಅಡಿ ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣಲಿಂಗ ಆಯ್ಕೆಗೆ ಅವಕಾಶವಿಲ್ಲ. ಆದಾಗ್ಯೂ ಇಂತಹ ಕಾನೂನು ಬಾಹಿರ ಕ್ರಮಗಳಲ್ಲಿ ಭಾಗಿಯಾದಲ್ಲಿ ಅಂತವರ ವಿರುದ್ಧ ಕಠಿಣವಾದ ಕಾನೂನು ಕ್ರಮಕೈಗೊಳ್ಳಲಾಗುವುದು. ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆ-1994 ರಡಿಯಲ್ಲಿ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕಾನೂನು ಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ.
ಕಾಯ್ದೆ ಅನುಸಾರ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕುರಿತಂತೆ ಯಾವುದೇ ರೀತಿಯ ಜಾಹೀರಾತು ನೀಡುವಂತಿಲ್ಲ. ಸರ್ಕಾರಿ ಅಥವಾ ಖಾಸಗಿ ಯಾವುದೇ ವೈದ್ಯರು ಇಂತಹ ಕೃತ್ಯಗಳಲ್ಲಿ ಭಾಗಿಯಾದಲ್ಲಿ ಅವರ ವಿರುದ್ಧ ಕಠಿಣ ಕ್ರಮಕ್ಕೆ ಅವಕಾಶವಿದೆ. ಈ ಕಾಯ್ದೆಯಡಿ ತಪಾಸಣಾ ಮತ್ತು ಮೇಲ್ವಿಚಾರಣೆಗಾಗಿ ಜಿಲ್ಲಾ ಮಟ್ಟದ ಸಲಹಾ ಸಮಿತಿ ಹಾಗೂ ತಪಾಸಣಾ ಸಮಿತಿಯನ್ನು ರಚಿಸಲಾಗಿದೆ. ತಪಾಸಣಾ ಸಮಿತಿಯು ಸ್ಕ್ಯಾನಿಂಗ್ ಸೆಂಟರ್ಗಳಿಗೆ ಭೇಟಿ ನೀಡಿ, ಪರಿಶೀಲಿಸಿ, ಸಲಹಾ ಸಮಿತಿ ಸಭೆಯಲ್ಲಿ ವರದಿ ನೀಡಬೇಕು ಎಂದರು.
ಎಲ್ಲ ಸ್ಕ್ಯಾನಿಂಗ್ ಸೆಂಟರ್ ಪಿ.ಸಿ & ಪಿ.ಎನ್.ಡಿ.ಟಿ ಕಾಯ್ದೆಯಡಿ ನಿಯಮಾನುಸಾರ ನೋಂದಣಿ ಮಾಡಿಕೊಳ್ಳಬೇಕು ಹಾಗೂ ನೋಂದಣಿ ಅವಧಿ ಪೂರ್ಣಗೊಳ್ಳುವುದಕ್ಕಿಂತ ಮೂರು ತಿಂಗಳ ಮುಂಚೆ ಅರ್ಜಿ ಸಲ್ಲಿಸಿ ನವೀಕರಣ ಮಾಡಿಕೊಳ್ಳಬೇಕು. ಸ್ಕ್ಯಾನಿಂಗ್ ಕುರಿತಾದ ಮಾರ್ಗಸೂಚಿಗಳನ್ನು ಪಾಲಿಸಿ ನಿಗದಿತ ನಮೂನೆಗಳನ್ನು ನಿರ್ವಹಿಸಬೇಕು. ನೋಂದಣಿ/ ಪರವಾನಗಿ ನವೀಕರಣವಿಲ್ಲದ ಆರೋಗ್ಯ ಸಂಸ್ಥೆಗಳ ಮೇಲೆ, ನಿಗದಿತ ನಿಯಮ ಪಾಲನೆ ಹಾಗೂ ದಾಖಲಾತಿಗಳನ್ನು ನಿರ್ವಹಿಸದ ಆರೋಗ್ಯ ಸಂಸ್ಥೆಗಳನ್ನು ಮುಚ್ಚಿಸಲು ಅಥವಾ ಸ್ಥಗಿತಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆ ಅನುಸಾರ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧಿಸಲಾಗಿದೆ. ಸರ್ಕಾರಿ ಅಥವಾ ಖಾಸಗಿ ಯಾವುದೇ ವೈದ್ಯರು ಇಂತಹ ಕೃತ್ಯಗಳಲ್ಲಿ ಭಾಗಿಯಾದಲ್ಲಿ ಅವರಿಗೆ ಕಾರಾಗೃಹ ಶಿಕ್ಷೆ ಸಹಿತ ದಂಡವನ್ನು ವಿಧಿಸಲಾಗುವುದು. ಮೊದಲ ಅಪರಾಧಕ್ಕೆ 5 ವರ್ಷ ವೈದ್ಯಕೀಯ ಪರವಾನಿಗೆಯನ್ನು ರದ್ದುಪಡಿಸುವುದು.
ನಂತರದ ಅಪರಾಧಕ್ಕೆ ಸಂಬಂಧಿಸಿದ ವೈದ್ಯರ ವೈದ್ಯಕೀಯ ಪರವಾನಿಗೆಯನ್ನು ರಾಜ್ಯ ವೈದ್ಯಕೀಯ ಮಂಡಳಿಯಿಂದ ಶಾಶ್ವತವಾಗಿ ತೆಗೆದು ಹಾಕಿ, ವೈದ್ಯಕೀಯ ವೃತ್ತಿ ನಡೆಸಲು ಆಜೀವ ನಿಷೇಧ ಹೇರಲಾಗುವುದು. ಒಂದು ವೇಳೆ ಸ್ವತಃ ಮಹಿಳೆ, ಆಕೆಯ ಪತಿ ಅಥವಾ ಸಂಬಂಧಿಕರು ಭ್ರೂಣ ಲಿಂಗ ಪತ್ತೆಗೆ ಯತ್ನಿಸಿ, ವೈದ್ಯರಿಗೆ ಒತ್ತಡ ಹೇರಿದಲ್ಲಿ ಅವರಿಗೆ ಮೂರರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ರೂ.50 ಸಾವಿರದಿಂದ 1 ಲಕ್ಷದವರೆಗೆ ದಂಡವನ್ನು ವಿಧಿಸಲು ಅವಕಾಶವಿದೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಮುನಿರಾಬಾದ ಸಮುದಾಯ ಆರೋಗ್ಯ ಕೇಂದ್ರದ ಪ್ರಸೂತಿ ತಜ್ಞರಾದ ಕೆ.ಹೆಚ್. ತೊಗರಿ, ಜಿಲ್ಲಾ ಆಸ್ಪತ್ರೆಯ ಮಕ್ಕಳ ತಜ್ಞ ವಿಭಾಗದ ಮುಖ್ಯಸ್ಥರು ಡಾ.ಗಿರೀಶ, ಕೊಪ್ಪಳ ಯೂನಿಸೆಫ್ ಚೈಲ್ಡ್ ಪ್ರೋಟೆಕ್ಷನ್ ಪ್ರೋಗ್ರಾಮ್ ಅಧಿಕಾರಿ ಹರೀಶ್ ಜೋಗಿ, ಜಿಲ್ಲಾ ಅನುಷ್ಠಾನಾಧಿಕಾರಿಗಳಾದ ಡಾ. ರವೀಂದ್ರನಾಥ್ ಎಂ.ಎಚ್., ಜಿಲ್ಲಾ ಆಸ್ಪತ್ರೆಯ ರೇಡಿಯೋಲಜಿಸ್ಟ್ ಡಾ. ದಯಾನಂದ ಸ್ವಾಮಿ, ಗಂಗಾವತಿಯ ಪ್ರಸೂತಿ ತಜ್ಞ ಡಾ. ಈಶ್ವರ್ ಸವಡಿ, ಜಿಲ್ಲಾಮಟ್ಟದ ಐ.ಆರ್. ಐ.ಎ ಪ್ರತಿನಿಧಿಸುವ ರೇಡಿಯೋಲಜಿಸ್ಟ್ ಡಾ. ಮಲ್ಲನಗೌಡ ಪೋಲೀಸ್ ಪಾಟೀಲ್, ಆಲ್ಫಾ ಆರೋಗ್ಯ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸಲೀಮಾ ಜಾನ್, ರಿಲೀಫ್ ಫೌಂಡೇಶನ್ ಫಾರ್ ಹೆಲ್ತ್ ಸರ್ವಿಸ್ ಸಂಸ್ಥೆಯ ಡಾ.ವಿಶ್ವನಾಥ ಬಸವರಾಜ ನಲ್ವಾಡ, ಧ್ವನಿ ಸ್ವಯಂ ಸೇವಾ ಸಂಸ್ಥೆಯ ಶಂಕ್ರಪ್ಪ ಬಿ.ಸುರಳ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್