
ವಿಜಯಪುರ, 06 ಮಾರ್ಚ್ (ಹಿ.ಸ.)
ಆ್ಯಂಕರ್ : ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ತುಬಚಿ-ಬಬಲೇಶ್ವರ ಏತನೀರಾವರಿ ಯೋಜನೆಯಡಿ ನೀರನ್ನು ಸಂಗ್ರಹಿಸಲು ಬಾಬಾನಗರದಲ್ಲಿ ಆಣೆಕಟ್ಟು ಕಟ್ಟಲು ಇಂದಿನ ಬಜೆಟ್ ನಲ್ಲಿ ಸೇರ್ಪಡೆಯಾಗಿರುವುದು ವಿಜಯಪುರ ಜಿಲ್ಲೆಯ ಅತೀ ಎತ್ತರದ ಪ್ರದೇಶದ ರೈತರಿಗೆ ನಮ್ಮ ಸರ್ಕಾರ ಈ ಬಜೆಟ್ ನಲ್ಲಿ ವಿಶೇಷ ಕೊಡುಗೆ ನೀಡಿದೆ ಎಂದು ತಿಕೋಟಾ ತಾಲೂಕಿನ ರೈತ ಮುಖಂಡರಾದ ಸೋಮನಾಥ ಬಾಗಲಕೋಟ, ಸಿದ್ದು ಗೌಡನವರ, ಮಧು ಸಾಹುಕಾರ ಜಾಧವ, ಎ.ಎಂ.ಪಾಟೀಲ ಬಿಜ್ಜರಗಿ, ಮಲ್ಲಿಕಾರ್ಜುನ ಲೋಣಿ, ಎಂ.ಎಸ್.ರುದ್ರಗೌಡರ, ಮಧುಕರ ಜಾಧವ, ಜಕ್ಕಪ್ಪ ಎಡವೆ, ಎಸ್.ಎಸ್.ಗುದಿಗೆನ್ನವರ, ಗುರು ಮಾಳಿ, ದಾನಪ್ಪ ಚೌಧರಿ, ಡಾ. ಗಜಾನನ ಮೈಶ್ಯಾಳಿ, ವಿಜುಗೌಡ ಪಾಟೀಲ, ಜಗದೀಶಗೌಡ ಪಾಟೀಲ, ಬಸಯ್ಯ ವಿಭೂತಿ, ರಾಮು ದೇಸಾಯಿ ಸೇರಿದಂತೆ ಮತ್ತಿತರರು ತಿಳಿಸಿದ್ದಾರೆ.
ಬಜೆಟ್ ಮಂಡನೆ ಆಗುತ್ತಿದ್ದಂತೆಯೇ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಮಖಂಡಿ ತಾಲೂಕಿನ ಕವಟಗಿ ಗ್ರಾಮದ ಹತ್ತಿರ ನಿರ್ಮಿಸಿರುವ ಜಾಕವೆಲ್ ನಿಂದ ಕೃಷ್ಣಾ ನದಿಯ ನೀರೆತ್ತಿ ತುಬಚಿ-ಬಬಲೇಶ್ವರ ಏತನೀರಾವರಿ ಯೋಜನೆಯ ಮೂಲಕ ತಿಕೋಟಾ ಹಾಗೂ ಸಾವಳಗಿ ಭಾಗದ ಜಮೀನುಗಳಿಗೆ ನೀರಾವರಿ ಸೌಕರ್ಯ ಕಲ್ಪಿಸಲಾಗುತ್ತಿದ್ದೆ. ಬೇಸಿಗೆಯಲ್ಲಿ ಕೃಷ್ಣಾನದಿ ನೀರಿನ ಮಟ್ಟ ಕುಸಿಯುತ್ತದೆ. ಕೃಷ್ಣಾ ನದಿಯ ಜಾಕವೆಲ್ ಕವಟಗಿಯಿಂದ ನೀರು ಎತ್ತಲು ಸ್ಥಳೀಯ ರೈತರ ವಿರೋಧ, ನೀರಿನ ಅಲಭ್ಯತೆಯಿಂದ ಬೇಸಿಗೆಯಲ್ಲಿ ನೀರು ಹರಿಸಲು ಕಷ್ಟವಾಗುತ್ತಿತ್ತು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ 6ಟಿಎಂಸಿ ನೀರು ಬಳಕೆಯ 3000ಕೋಟಿ ಮೊತ್ತದ ತುಬಚಿ-ಬಬಲೇಶ್ವರ ಯೋಜನೆ ಬೇಸಿಗೆಯಲ್ಲಿಯೂ ಉಪಯೋಗವಾಗುವಂತೆ ನಮ್ಮ ಶಾಸಕರು, ಕೈಗಾರಿಕಾ ಸಚಿವರು ಆಗಿರುವ ಎಂ.ಬಿ.ಪಾಟೀಲರವರು ನೀರಾವರಿ ತಜ್ಞ ಡಾ.ವಿ.ಪಿ.ಹುಗ್ಗಿ ಅವರಿಗೆ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಹಿಡಿದಿಟ್ಟು, ಬೇಸಿಗೆಯಲ್ಲಿ ಅವಶ್ಯಕತೆ ಇದ್ದಾಗ ಬಳಸುವಂತೆ ಯೋಜನೆಯನ್ನು ರೂಪಿಸಲು ತಿಳಿಸಿದ್ದರು.
ಬಾಬಾನಗರದ ಹತ್ತಿರ 530 ಎಕರೆ ಸರ್ಕಾರಿ ಭೂಮಿ ಇದ್ದು, ಅಲ್ಲಿ ನೈಸರ್ಗಿಕವಾಗಿ ಎರಡೂ ಬದಿಯಲ್ಲಿ ಗುಡ್ಡವಿದೆ. ಆ ಗುಡ್ಡಕ್ಕೆ ರೂ.602 ಕೋಟಿ ವೆಚ್ಚದಲ್ಲಿ 0.67 ಟಿ.ಎಂ.ಸಿ ನೀರು ಸಂಗ್ರಹ ಸಾಮರ್ಥ್ಯದ ಆಣೆಕಟ್ಟು ನಿರ್ಮಾಣ ಮಾಡಿ, ಮಳೆಗಾಲದಲ್ಲಿ ಕೃಷ್ಣಾನದಿಯಿಂದ ನೀರನ್ನು ತುಂಬಿಸುವುದು, ಬೇಸಿಗೆಯಲ್ಲಿ ಅವಶ್ಯಕತೆಗೆ ತಕ್ಕಂತೆ ಕೆನಾಲ್ ಮೂಲಕ ನೀರು ಹರಿಸುವುದು. ಇದರಿಂದ ತಿಕೋಟಾ ತಾಲೂಕಿನ ಕೆರೆಗಳನ್ನು ಬೇಸಿಗೆಯಲ್ಲಿ ತುಂಬಿಸುವುದು ಹಾಗೂ ಕಾಲುವೆ ಜಾಲದ ಮೂಲಕ ಕೆನಾಲ್ ಮತ್ತು ಹಳ್ಳಗಳಿಗೆ ನೀರು ಹರಿಸಲು ಅನುಕೂಲವಾಗಲಿದೆ.
ಬಜೆಟ್ ನಲ್ಲಿ ಬಾಬಾನಗರ ಆಣೆಕಟ್ಟು ನಿರ್ಮಾಣ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಣೆ ಮಾಡುತ್ತಿದ್ದಂತೆಯೆ ಸ್ಥಳೀಯ ಗ್ರಾಮಸ್ಥರು ಪಟಾಕಿ ಸಿಡಿಸಿ, ಸಂಭ್ರಮಿಸಿ, ತಮ್ಮ ಗ್ರಾಮದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಮತ್ತು ಯೋಜನೆಯ ರೂವಾರಿ ಸಚಿವ ಎಂ.ಬಿ.ಪಾಟೀಲ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande