
ಕೋಲಾರ, ೦೬ ಮಾರ್ಚ್ (ಹಿ.ಸ)
ಆ್ಯಂಕರ್ : ದಾಖಲೆಯ ೧೭ನೇ ಬಜೆಟ್ನಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಯಲುಸೀಮೆಯ ಶಾಶ್ವತ ನೀರಾವರಿ ಯೋಜನೆಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ. ನೀರಿಗಾಗಿಯಾದರೂ ಒಗ್ಗಟ್ಟಾಗಿ ಒತ್ತಡ ಹೇರುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಚಿಕ್ಕಬಳ್ಳಾಪುರದ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆರ್. ಆಂಜನೇಯರೆಡ್ಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಸರ್ಕಾರದಿಂದ ಪೆನ್ನಾರ್ ಜಲಾನಯನ ಪ್ರದೇಶದ ಬರಪೀಡಿತ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಎಂದಿನಂತೆ ನಿರ್ಲಕ್ಷ್ಯ ಮಾಡಲಾಗಿದೆ. ದಶಕಗಳಿಂದ ಹೋರಾಟ ಮಾಡುತ್ತಿದ್ದರೂ ತಾರತಮ್ಯ ಮಾಡಲಾಗಿದೆ. ಸರ್ಕಾರಕ್ಕೆ ನಾವು ಕಟ್ಟುವ ತೆರಿಗೆ ಬೇಕು. ನಮ್ಮ ರೈತರ ಭೂಮಿ ಬೇಕು. ನಮ್ಮ ಜಿಲ್ಲೆಗಳ ಅಂತರ್ಜಲ ಈಗಾಗಲೇ ಪಾತಾಳ ತಲುಪಿದೆ. ಕುಡಿಯುವ ನೀರಿನ ಮೂಲಗಳು ವಿಷಮಯವಾಗಿವೆ. ಕುಡಿಯುವ ನೀರಿನಲ್ಲಿ ಯುರೇನಿಯಂ ಪತ್ತೆಯಾಗಿರುವ ಬಗ್ಗೆಯೂ ಸರ್ಕಾರಕ್ಕೆ ಕನಿಷ್ಠ ಕನಿಕರವಿಲ್ಲ ಎಂದು ವಿಷಾಧಿಸಿದ್ದಾರೆ.
ಸಿ.ಎ.ಜಿ. ವರದಿಯಲ್ಲಿ ಎತ್ತಿನಹೊಳೆಯ ಕರ್ಮಕಾಂಡ ಬಟಾಬಯಲಾಗಿದ್ದರೂ ಬಜೆಟ್ನಲ್ಲಿ ಮುಂದುವರೆದ ಎತ್ತಿನಹೊಳೆ ಯೋಜನೆಯ ಭಜನೆ, ಚುನಾವಣೆ ಗೆಲ್ಲಲು ಮಾತ್ರ ಮೂರನೇ ಹಂತದ ಶುದ್ಧೀಕರಣದ ಪೊಳ್ಳು ಭರವಸೆ, ಬಜೆಟ್ ನಲ್ಲಿ ಕೆ ಸಿ ವ್ಯಾಲಿ ಮತ್ತು ಹೆಚ್ ಎನ್ ವ್ಯಾಲಿ ಯೋಜನೆಗಳ ಮೂರನೇ ಹಂತದ ಶುದ್ಧೀಕರಣಕ್ಕೆ ಮುಂದಾಗದೆ ಮೊಂಡಾಟ, ಕೆರೆ ಕುಂಟೆ ಕಾಲುವೆಗಳ ಸಮಗ್ರ ಅಭಿವೃದ್ಧಿಗಾದರೂ ಪ್ಯಾಕೇಜ್ ನೀಡಿಲ್ಲ. ತುರ್ತಾಗಿ ಕುಡಿಯುವ ನೀರಿನ ದಾಹವನ್ನು ತಣಿಸಬಲ್ಲ ಕೃಷ್ಣಾ- ಪೆನ್ನಾರ್ ನದಿ ಜೋಡಣೆ ಬಗ್ಗೆಯೂ ಚಕಾರವೆತ್ತಿಲ್ಲ ಎಂದು ಅಸಮಧಾನ ಹೊರ ಹಾಕಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್