
ಹುಬ್ಬಳ್ಳಿ, 04 ಮಾರ್ಚ್ (ಹಿ.ಸ.):
ಆ್ಯಂಕರ್:
ಹುಬ್ಬಳ್ಳಿ ನಗರದ ನೆಹರು ಮೈದಾನದಲ್ಲಿ ಹುಬ್ಬಳ್ಳಿ ಫೋಟೋ ಹಾಗೂ ವೀಡಿಯೋಗ್ರಾಫರ್ ಸಂಘ ಆಶ್ರಯದಲ್ಲಿ ಮೂರನೇ ಆವೃತ್ತಿಯ ಅಂತರ್‌ಸಂಘ ವಲಯ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಪ್ರಾರಂಭವಾಯಿತು. ಪಂದ್ಯಾವಳಿ ಇಂದು ಹಾಗೂ ನಾಳೆ (ಮಾರ್ಚ್ 4 ಮತ್ತು 5) ಎರಡು ದಿನಗಳ ಕಾಲ ನಡೆಯಲಿದೆ.
ಸುವರ್ಣ ಗ್ರೂಪ್ ಆಫ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ವಿ. ಎಸ್. ವಿ. ಪ್ರಸಾದ್ ಅವರು ಕ್ರಿಕೆಟ್ ಆಡುವ ಮೂಲಕ ಟೂರ್ನಮೆಂಟ್‌ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ರಿಕೆಟ್ ಆಡುವುದರಿಂದ ದೈಹಿಕ ಸದೃಢತೆ ಹೆಚ್ಚುತ್ತದೆ. ಪ್ರತಿದಿನ ಕ್ಯಾಮೆರಾ ಹಿಡಿದು ಛಾಯಾಚಿತ್ರ ಮತ್ತು ವೀಡಿಯೋ ಸೇವೆ ಸಲ್ಲಿಸುವ ಛಾಯಾಗ್ರಾಹಕರು ತಮ್ಮ ಆರೋಗ್ಯದ ಕಡೆಗೂ ಗಮನ ಹರಿಸಿ ಸದೃಢರಾಗಿರಬೇಕು. ಯಾವುದೇ ದುಷ್ಪ್ರವೃತ್ತಿಗಳಿಗೆ ಒಳಗಾಗದೆ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು.
ಸಂಘದ ಅಧ್ಯಕ್ಷರಾದ ಕಿರಣ್ ಬಾಕಳೆ ಅವರು ಮಾತನಾಡಿ, “ಈ ಪಂದ್ಯಾವಳಿ ಕೇವಲ ಕ್ರೀಡಾ ಸ್ಪರ್ಧೆಯಷ್ಟೇ ಅಲ್ಲ, ನಮ್ಮ ಫೋಟೋ ಹಾಗೂ ವೀಡಿಯೋಗ್ರಾಫರ್ ಸಮುದಾಯದ ಏಕತೆ ಮತ್ತು ಸೌಹಾರ್ದತೆಯನ್ನು ಗಟ್ಟಿಗೊಳಿಸುವ ವೇದಿಕೆ. ತಾರತಮ್ಯವಿಲ್ಲದೆ ಎಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಆಟವಾಡಿ ದೈಹಿಕ ಮತ್ತು ಮಾನಸಿಕ ಸಮತೋಲನ ಕಾಪಾಡಿಕೊಳ್ಳಬೇಕು” ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಡಾ. ರಮೇಶ್ ಮಾದಪ್ಪನವರ,ಎಸ್‌ಆರ್‌ಎಂ ಶಾಮಿಯಾನ, ಸ್ಟುಡಿಯೋ 2000, ಜೈನ್ ಕಂಪ್ಯೂಟರ್, ರಾಜಧಾನಿ ಎಲೆಕ್ಟ್ರಿಕಲ್, ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಂಘದ ಉಪಾಧ್ಯಕ್ಷ ದಿನೇಶ್ ದಾಬಡೆ, ಮಾಜಿ ಅಧ್ಯಕ್ಷ ಇಂದೂಧರ್ ಸಾಲಿ, ರವೀಂದ್ರ ಕಾಟಿಗರ್ ಹಾಗೂ ಸಂಘದ ಆಡಳಿತ ಮಂಡಳಿ ಸದಸ್ಯರು ಮತ್ತು ಅನೇಕ ಛಾಯಾಗ್ರಾಹಕರು ಉಪಸ್ಥಿತರಿದ್ದರು.
ಎಚ್‌ಪಿವಿಎ ಕ್ರಿಕೆಟ್ ಕಮಿಟಿ ಸದಸ್ಸೇರಾದ ಪವನ್ ಕಠಾರೆ, ಕಿಶನ್ ಶಾಲಗಾರ್, ವಿಜಯ್ ಪೂಜಾರಿ, ಕೃಷ್ಣ ಪೂಜಾರಿ, ರವಿ ಪಟ್ಟಣ, ರೋಷನ್ ಅಥಣಿ, ರವಿ ಕಂಡಿ , ಅಮೃತ ಅರಸಿದ್ಧ , ಕಿರಣ್ ಮೆಹರವಾಡೆ, ರಿತೇಶ್ ಭೋಜಗಾರ್, ವಿಶಾಲ್ ಪೂಜಾರಿ, ಗಣೇಶ್ ಜಿತೂರಿ, ಸಚಿನ್ ಪವಾರ್, ನಾರಾಯಣ ಜಡಿ, ಶ್ರೀನಿವಾಸ್ ಕಾಟಿಗರ್ ಹಾಗೂ ರಾಜನ್ ಮಿಚೆಲ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದಾರೆ.
ಪಂದ್ಯಾವಳಿಯ ಸಮಾರೋಪ ಸಮಾರಂಭ ನಾಳೆ ಸಾಯಂಕಾಲ 5:00 ಗಂಟೆಗೆ ನಡೆಯಲಿದ್ದು, ಚಾಂಪಿಯನ್ ಹಾಗೂ ರನ್ನರ್-ಅಪ್ ತಂಡಗಳಿಗೆ ಆಕರ್ಷಕ ಬಹುಮಾನಗಳನ್ನು ಅತಿಥಿಗಳಿಂದ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಕಿರಣ ಬಾಕಳೆ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa