
ಹಾಸನ, 04 ಮಾರ್ಚ್ (ಹಿ.ಸ.):
ಆ್ಯಂಕರ್:ಹಾಸನ ಜಿಲ್ಲೆಯಲ್ಲಿ ಭೂ ಸುರಕ್ಷಾ ಯೋಜನೆಯಡಿ ಎಲ್ಲಾ ತಾಲ್ಲೂಕುಗಳ ದಾಖಲೆಗಳ ಡಿಜಿಟಲೀಕರಣವನ್ನು ತಕ್ಷಣ ಪೂರ್ಣಗೊಳಿಸುವಂತೆ ಕಂದಾಯ ಹಾಗೂ ಮುಜರಾಯಿ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ದಾಖಲೆಗಳನ್ನು ಎ.ಬಿ.ಸಿ.ಡಿ. ವರ್ಗೀಕರಣದಂತೆ ಸ್ಕ್ಯಾನ್ ಮಾಡಿ, ಅಗತ್ಯವಿದ್ದಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಕದ ಮೂಲಕ ಪ್ರಕ್ರಿಯೆ ವೇಗಗೊಳಿಸಬೇಕೆಂದರು. ಪೌತಿ ಖಾತೆ ಆಂದೋಲನವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಬಾಕಿ ಇರುವ ಕಂದಾಯ ಗ್ರಾಮಗಳ ಪ್ರಸ್ತಾವನೆಗಳನ್ನು ಸಲ್ಲಿಸಲು ನಿರ್ದೇಶಿಸಿದರು.
ಸರ್ಕಾರಿ ಜಮೀನು ಹಾಗೂ ಕೆರೆಗಳ ಒತ್ತುವರಿ ತೆರವಿಗೆ ಕ್ರಮವಹಿಸುವುದು, ಖಾಲಿ ಹುದ್ದೆಗಳ ವಿವರ ವರದಿ ಸಲ್ಲಿಸುವುದು ಅಗತ್ಯವೆಂದರು. ಜಿಲ್ಲೆಯಲ್ಲಿ ಇರುವ 2,456 ದೇವಸ್ಥಾನಗಳ ಹೆಸರಿನಲ್ಲಿ ಅಧಿಸೂಚನೆ ಹೊರಡಿಸಿ, ಮುಜರಾಯಿ ಆಸ್ತಿಗಳನ್ನು ರಕ್ಷಿಸಲು ಸೂಚಿಸಿದರು. ದೇವಸ್ಥಾನಗಳ ಇ-ಖಾತೆ, ಪಹಣಿ ದಾಖಲಾತಿ ಹಾಗೂ ಸರ್ವೇ ಪೂರ್ಣಗೊಳಿಸಿ, ಒತ್ತುವರಿ ತೆರವುಗೊಳಿಸಿ ಬೇಲಿ/ಕಂಪೌಂಡ್ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕೆಂದರು. ಎಲ್ಲಾ ದೇವಸ್ಥಾನಗಳಿಗೆ ಹೆಸರು, ವಿಳಾಸ ಮತ್ತು ದರ್ಜೆ ಸೂಚಿಸುವ ನಾಮಫಲಕ ಅಳವಡಿಕೆ ಕಡ್ಡಾಯಗೊಳಿಸಿದರು.
ಮುಜರಾಯಿ ಇಲಾಖೆಯ ಆಯುಕ್ತ ಶರತ್ ಮಾಹಿತಿ ನೀಡಿ, ಜಿಲ್ಲೆಯಲ್ಲಿ 6 ‘ಎ’ ದರ್ಜೆ, 6 ‘ಬಿ’ ದರ್ಜೆ ಹಾಗೂ 2,444 ‘ಸಿ’ ದರ್ಜೆಯ ದೇವಸ್ಥಾನಗಳಿದ್ದು, 1,796ಕ್ಕೆ ಅಧಿಸೂಚನೆ ಪ್ರಸ್ತಾವನೆ ಸಲ್ಲಿಕೆಯಾಗಿರುವುದಾಗಿ ತಿಳಿಸಿದರು. 1,562 ಮುಜರಾಯಿ ದೇವಸ್ಥಾನ/ಆಸ್ತಿಗಳಲ್ಲಿ 691 ಪಹಣಿ, 808 ಗ್ರಾಮ ಠಾಣಾ ಹಾಗೂ 63 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಸೇರಿವೆ ಎಂದರು.
ಜಿಲ್ಲಾಧಿಕಾರಿ ಕೆ.ಎಸ್ ಲತಾ ಕುಮಾರಿ ಮಾತನಾಡಿ, ಮಾರ್ಚ್ ಅಂತ್ಯದೊಳಗೆ ಅರಕಲಗೂಡು, ಸಕಲೇಶಪುರ, ಆಲೂರು, ಅರಸೀಕೆರೆ ಹಾಗೂ ಜಿಲ್ಲಾಧಿಕಾರಿ ಕಚೇರಿಯ ದಾಖಲೆಗಳ ಡಿಜಿಟಲೀಕರಣ ಪೂರ್ಣಗೊಳ್ಳಲಿದೆ ಎಂದರು. 2,308 ದೇವಸ್ಥಾನ/ಆಸ್ತಿಗಳಿಗೆ ಖಾತೆ ಇದ್ದು, 546 ಖಾತೆಗಳ ನಿರ್ವಹಣೆ ಬಾಕಿ ಇದ್ದು ಶೀಘ್ರ ಪೂರ್ಣಗೊಳಿಸಲಾಗುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣನವರ್, ಉಪ ನಿರ್ದೇಶಕಿ ಹೇಮಲತಾ ಹಾಗೂ ಎಲ್ಲಾ ತಹಸೀಲ್ದಾರರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa