
ಗದಗ, 04 ಮಾರ್ಚ್ (ಹಿ.ಸ.)
ಆ್ಯಂಕರ್: ಸಮಾಜದಲ್ಲಿ ರಕ್ತದಾನದ ಮಹತ್ವವನ್ನು ಅರಿವು ಮೂಡಿಸುವ ಉದ್ದೇಶದಿಂದ ಗದಗ ಭಾವಸಾರ ವತಿಯಿಂದ, ವಿಜನ್ ಇಂಡಿಯಾ, ಪಂ.ಪಂಚಾಕ್ಷರ ಕಲಾ ಗವಾಯಿಗಳವರ ಮಹಾವಿದ್ಯಾಲಯದ ಯುಥ್ ರೆಡ್ಕ್ರಾಸ್ ಘಟಕ ಹಾಗೂ ಅಂಬಿಕಾ ರಕ್ತನಿಧಿ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಗದಗ ನಗರದ ವೀರೇಶ್ವರ ಪುಣ್ಯಾಶ್ರಮ ಸಭಾಂಗಣದಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ ರಕ್ತಗುಂಪು ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಜಯಂತಿಯ ಅಂಗವಾಗಿ ಹಮ್ಮಿಕೊಂಡಿದ್ದ ಈ ಶಿಬಿರದಲ್ಲಿ ವಿದ್ಯಾರ್ಥಿಗಳು, ಯುವಕರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದರು. ಶಿಬಿರದಲ್ಲಿ ಒಟ್ಟು 30 ಮಂದಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ ಮಾನವೀಯತೆ ಮೆರೆದರೆ, 80ಕ್ಕೂ ಹೆಚ್ಚು ಮಂದಿಗೆ ಉಚಿತವಾಗಿ ರಕ್ತಗುಂಪು ತಪಾಸಣೆ ನಡೆಸಿ ಆರೋಗ್ಯ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗದಗ ರೆಡ್ಕ್ರಾಸ್ ಸಂಸ್ಥೆಯ ಸಭಾಪತಿ ಡಾ. ಆರ್.ಎನ್. ಗೋಡಬೋಲೆ ಅವರು, “ರಕ್ತದಾನವು ಜೀವದಾನಕ್ಕೆ ಸಮಾನ. ಅಪಘಾತಗಳು, ಹೆರಿಗೆಯ ಸಂದರ್ಭಗಳು, ತುರ್ತು ಶಸ್ತ್ರಚಿಕಿತ್ಸೆಗಳು ಸೇರಿದಂತೆ ಅನೇಕ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಉಂಟಾಗುತ್ತದೆ. ಅಂತಹ ಸಂದರ್ಭದಲ್ಲಿ ಸ್ವಯಂಪ್ರೇರಿತ ರಕ್ತದಾನಿಗಳು ಸಮಾಜಕ್ಕೆ ಮಹತ್ತರ ಸೇವೆ ಸಲ್ಲಿಸುತ್ತಾರೆ” ಎಂದು ಹೇಳಿದರು.
ಆರೋಗ್ಯವಂತ ಪ್ರತಿಯೊಬ್ಬರೂ ವೈದ್ಯರ ಸಲಹೆಯ ಮೇರೆಗೆ ವರ್ಷಕ್ಕೆ ಕನಿಷ್ಠ ಎರಡು ಬಾರಿ ರಕ್ತದಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ರಕ್ತದಾನದಿಂದ ದೇಹದಲ್ಲಿ ಹೊಸ ರಕ್ತ ಉತ್ಪಾದನೆ ಪ್ರಕ್ರಿಯೆ ಚುರುಕುಗೊಳ್ಳುತ್ತದೆ ಹಾಗೂ ಆರೋಗ್ಯದ ಸಮತೋಲನ ಕಾಪಾಡಲು ಸಹಕಾರಿ ಆಗುತ್ತದೆ ಎಂದು ವಿವರಿಸಿದರು.
ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಸಲಹೆ ನೀಡಿದ ಅವರು, “ದೈನಂದಿನ ಆಹಾರದಲ್ಲಿ ಹಸಿರು ತರಕಾರಿ, ಹಣ್ಣುಗಳು, ಪ್ರೋಟೀನ್ ಸಮೃದ್ಧ ಆಹಾರ ಪದಾರ್ಥಗಳನ್ನು ಸೇವಿಸಬೇಕು. ನಿಯಮಿತವಾಗಿ ಲಘು ವಾಯುವಿಹಾರ, ಯೋಗ, ಧ್ಯಾನ ಹಾಗೂ ಮನಶಾಂತಿ ನೀಡುವ ಚಟುವಟಿಕೆಗಳನ್ನು ಅನುಸರಿಸಬೇಕು. ಒತ್ತಡರಹಿತ ಜೀವನ ಶೈಲಿ ರಕ್ತದಾನದ ಸಾಮರ್ಥ್ಯ ಹೆಚ್ಚಿಸುತ್ತದೆ” ಎಂದು ತಿಳಿಸಿದರು.
ಶಿಬಿರದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಆರ್.ಎಸ್. ದಾನರಡ್ಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಬಸವರಾಜ ಲಾಲಗಟ್ಟಿ, ಭಾವಸಾರ ವಿಜನ್ ಇಂಡಿಯಾ ಗದಗ ಘಟಕದ ಅಧ್ಯಕ್ಷ ಶ್ರೀಪಾದ ವೈಕುಂಠ ಹಾಗೂ ಅಂಬಿಕಾ ರಕ್ತನಿಧಿ ಕೇಂದ್ರದ ವ್ಯವಸ್ಥಾಪಕ ರೋಹಿತ್ ಚವ್ಹಾಣ ಉಪಸ್ಥಿತರಿದ್ದರು.
ರಕ್ತತಪಾಸಣೆ ಕಾರ್ಯವನ್ನು ಡಾ. ದತ್ತಾತ್ರೇಯ ವೈಕುಂಠ ಅವರ ನೇತೃತ್ವದಲ್ಲಿ ವೈದ್ಯಕೀಯ ಸಿಬ್ಬಂದಿ ಸಮರ್ಪಕವಾಗಿ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಪ್ರತಿಯೊಬ್ಬರೂ ತಮ್ಮ ರಕ್ತಗುಂಪಿನ ಬಗ್ಗೆ ತಿಳಿದಿರಬೇಕು. ತುರ್ತು ಸಂದರ್ಭಗಳಲ್ಲಿ ಇದು ಅತ್ಯಂತ ಅಗತ್ಯ ಮಾಹಿತಿ. ಕನಿಷ್ಠ ವರ್ಷಕ್ಕೊಮ್ಮೆ ರಕ್ತದಾನ ಮಾಡುವ ಮೂಲಕ ಸಮಾಜದ ಆರೋಗ್ಯ ವ್ಯವಸ್ಥೆಗೆ ಬೆಂಬಲ ನೀಡಬೇಕು” ಎಂದು ಸಲಹೆ ನೀಡಿದರು.
ಶಿಬಿರದಲ್ಲಿ ಅಶ್ವಥ್ ಸುಲಾಖೆ, ಆರ್.ಎಸ್. ತ್ರಿಮಲ್ಲೆ, ವೀರಣ್ಣ ಬೆಳಮಕರ, ಶ್ರೀಮತಿ ವಿಜಯಾ ನವಲೆ, ಪ್ರೊ. ಬಸವರಾಜ ಪೂಜಾರ, ಪ್ರೊ. ಮಂಜುಳಾ ಹೊಂಬಾಳಿ, ಪ್ರೊ. ಜೋಬಾಳೆ, ಡಾ. ವಿ.ಎ. ನಿಂಗೋಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಒಟ್ಟಾರೆ, ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಜಯಂತಿಯ ಅಂಗವಾಗಿ ನಡೆದ ಈ ರಕ್ತದಾನ ಶಿಬಿರವು ಸಮಾಜಮುಖಿ ಚಟುವಟಿಕೆಯಾಗಿ ಗಮನಸೆಳೆಯಿತು. ಯುವಜನರಲ್ಲಿ ಮಾನವೀಯತೆ ಹಾಗೂ ಸಾಮಾಜಿಕ ಜವಾಬ್ದಾರಿಯ ಮನೋಭಾವ ಬೆಳೆಸುವಲ್ಲಿ ಶಿಬಿರ ಯಶಸ್ವಿಯಾಗಿದೆ ಎಂದು ಸಂಘಟಕರು ಸಂತೋಷ ವ್ಯಕ್ತಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP