
ವಿಜಯಪುರ, 31 ಮಾರ್ಚ್ (ಹಿ.ಸ.)
ಆ್ಯಂಕರ್ : ಸಾರಿಗೆ ಬಸ್ಗೆ ಬುಲೆಟ್ ಬೈಕ್ ಗುದ್ದಿದ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸಜೀವ ದಹನಗೊಂಡ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೋಳಿ ಟೋಲ್ ನಾಕಾ ಬಳಿ ನಡೆದಿದೆ. ಆರಂಭದಲ್ಲಿ ಇದನ್ನು ಸಾಮಾನ್ಯ ರಸ್ತೆ ಅಪಘಾತವೆಂದು ಭಾವಿಸಲಾಗಿದ್ದರೂ, ಬಳಿಕ ಯುವಕ ಇನ್ಸ್ಟಾಗ್ರಾಂನಲ್ಲಿ ಹಾಕಿದ್ದ ವಿಡಿಯೋದಿಂದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ.
ಇಂದು ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ಸಿಂದಗಿಯಿಂದ ವಿಜಯಪುರ ಕಡೆಗೆ ತೆರಳುತ್ತಿದ್ದ ಬೈಕ್ ಸವಾರ ವೇಗವಾಗಿ ಬಂದು ಎದುರುಗಡೆಯಿಂದ ಬರುತ್ತಿದ್ದ ಸಾರಿಗೆ ಬಸ್ಗೆ ಗುದ್ದಿದ್ದಾನೆ. ಗುದ್ದಿದ ಪರಿಣಾಮ ಬೈಕ್ನ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಜೀವ ದಹನಗೊಂಡಿದ್ದಾನೆ. ಬೆಂಕಿಯ ತೀವ್ರತೆಗೆ ಸಾರಿಗೆ ಬಸ್ ಕೂಡ ಸುಟ್ಟು ಕರಕಲಾಗಿದ್ದು, ಸ್ಥಳದಲ್ಲಿ ಭಯಾನಕ ದೃಶ್ಯಗಳು ಕಂಡು ಬಂದವು.
ಮೃತ ಯುವಕನನ್ನು ಮುಳಸಾವಳಗಿ ಗ್ರಾಮದ ಅಭಿಷೇಕ ನಾಗರಾಳ ಎಂದು ಗುರುತಿಸಲಾಗಿದೆ. ಘಟನೆ ಬಳಿಕ ಪೊಲೀಸರು ಯುವಕನ ಸಾಮಾಜಿಕ ಜಾಲತಾಣ ಖಾತೆಗಳನ್ನು ಪರಿಶೀಲಿಸಿದಾಗ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಅಭಿಷೇಕ್ ಅಪಘಾತಕ್ಕೂ ಕೆಲವೇ ಕ್ಷಣಗಳ ಮುಂಚೆ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಸೆಲ್ಫಿ ವಿಡಿಯೋ ಹಾಕಿ, ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾನೆ. ಪ್ರೇಮ ಸಂಬಂಧದ ವಿಚಾರದಲ್ಲಿ ಕೆಲವರು ತನ್ನನ್ನು ಪ್ರಿಯತಮೆಯಿಂದ ದೂರ ಮಾಡಿದ್ದಾರೆ ಎಂದು ಆರೋಪಿಸಿ, ತನ್ನ ಆತ್ಮಹತ್ಯೆಗೆ ವಿರೇಶ ನಂದೂರು, ಆತನ ತಾಯಿ ಚೈತ್ರಾ ನಂದೂರು ಹಾಗೂ ಅವರ ಸಂಬಂಧಿ ನವೀನ್ಕುಮಾರ್ ಪಾಟೀಲ ಕಾರಣ ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ಇವರ ಫೋಟೋಗಳನ್ನು ಸಹ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವುದಾಗಿ ಹೇಳಿದ್ದಾನೆ.
ವಿಡಿಯೋ ಪೋಸ್ಟ್ ಮಾಡಿದ ಕೆಲವೇ ಸಮಯದಲ್ಲಿ ಕನ್ನೋಳಿ ಟೋಲ್ ನಾಕಾ ಬಳಿ ಈ ಭೀಕರ ಘಟನೆ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಇದು ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿನ ಯೋಜಿತ ಆತ್ಮಹತ್ಯೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಘಟನೆ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande