

ಗದಗ, 29 ಮಾರ್ಚ್ (ಹಿ.ಸ.)
ಆ್ಯಂಕರ್:- ಇಂಜಿನಿಯರಿಂಗ್ ಪದವಿ ಪಡೆದು ಉತ್ತಮ ಉದ್ಯೋಗದಲ್ಲಿದ್ದ ಯುವಕನೊಬ್ಬ, ಕೃಷಿಯಲ್ಲಿ ಸಾಧನೆ ಮಾಡಬೇಕು ಎಂಬ ಕನಸಿನಿಂದ ಕೆಲಸ ತೊರೆದು ಊರಿಗೆ ಮರಳಿದ್ದ. ಐದು ವರ್ಷಗಳಿಂದ ಶ್ರಮಪಟ್ಟು ಕೃಷಿಯಲ್ಲಿ ನೆಲೆ ಕಂಡುಕೊಂಡಿದ್ದ ಈ ಯುವ ರೈತನ ಕನಸು, ಅಕಾಲಿಕವಾಗಿ ಸುರಿದ ಆಲಿಕಲ್ಲು ಮಳೆಯ ದಾಳಿಗೆ ಭಸ್ಮವಾಗಿದೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದ ಶಿವರಾಜ್ ಕುಮಾರ್ ಕುರ್ತಕೋಟಿ ಎಂಬ ಯುವ ರೈತ, ಕೋವಿಡ್ ಸಮಯದಲ್ಲಿ ತನ್ನ ಇಂಜಿನಿಯರಿಂಗ್ ಉದ್ಯೋಗ ತ್ಯಜಿಸಿ ಕೃಷಿಯತ್ತ ಮುಖ ಮಾಡಿದ್ದನು. ಹೊಸ ತಂತ್ರಜ್ಞಾನ, ಇಸ್ರೇಲ್ ಮಾದರಿಯ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಕಳೆದ ಐದು ವರ್ಷಗಳಿಂದ ಯಶಸ್ವಿಯಾಗಿ ಬೆಳೆ ಬೆಳೆಸುತ್ತಾ ಬಂದಿದ್ದನು. ಈ ವರ್ಷ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲು ಉದ್ದೇಶಿಸಿ ಐದು ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆ ಬೆಳೆದಿದ್ದನು.
ಪ್ರತಿ ಎಕರೆಗೆ ಸುಮಾರು 1.5 ಲಕ್ಷ ರೂಪಾಯಿ ಖರ್ಚು ಮಾಡಿ, ಉತ್ತಮ ಗುಣಮಟ್ಟದ ಬೀಜ, ಡ್ರಿಪ್ ಸಿಂಚನ ವ್ಯವಸ್ಥೆ ಸೇರಿದಂತೆ ಆಧುನಿಕ ವಿಧಾನಗಳನ್ನು ಅನುಸರಿಸಿದ್ದನು. ಬೆಳೆ ಉತ್ತಮವಾಗಿ ಬೆಳೆಯುತ್ತಿದ್ದರಿಂದ ಪ್ರತಿ ಎಕರೆಗೆ 4 ರಿಂದ 5 ಲಕ್ಷ ರೂಪಾಯಿ ಆದಾಯ ಬರುತ್ತದೆ ಎಂಬ ಭರವಸೆ ಇತ್ತು. ಇನ್ನೂ ಕೇವಲ 10 ದಿನಗಳಲ್ಲಿ ಕಟಾವು ಮಾಡಲು ಸಿದ್ಧವಾಗಿದ್ದ ಬೆಳೆ, ರೈತನ ಕೈಗೆ ಬರುವ ಹಂತದಲ್ಲೇ ಪ್ರಕೃತಿಯ ಕೋಪಕ್ಕೆ ಗುರಿಯಾಗಿದೆ.
ನಿರಂತರವಾಗಿ ಅಕಾಲಿಕ ಆಲಿಕಲ್ಲು ಮಳೆಯ ಪರಿಣಾಮವಾಗಿ ಜಮೀನಿನಲ್ಲಿ ನೀರು ನಿಂತು, ಕಲ್ಲಂಗಡಿ ಹಣ್ಣುಗಳು ಸಂಪೂರ್ಣ ಹಾನಿಗೊಳಗಾಗಿವೆ. ಹಣ್ಣುಗಳು ಕೊಳೆಯಲು ಆರಂಭಿಸಿದ್ದು, ಕಟಾವು ಮಾಡುವುದಕ್ಕೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಬೆಳೆದ ಬೆಳೆ ಕಣ್ಣೆದುರೇ ನಾಶವಾಗುತ್ತಿರುವುದನ್ನು ಕಂಡು ಯುವ ರೈತ ಶಿವರಾಜ್ ಕುಮಾರ್ ಕಂಗಾಲಾಗಿದ್ದಾನೆ.
ಈ ಕುರಿತು ಮಾತನಾಡಿದ ಶಿವರಾಜ್ ಕುಮಾರ್, “ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಉದ್ಯೋಗ ಬಿಟ್ಟು ಊರಿಗೆ ಬಂದೆ. ಐದು ವರ್ಷಗಳಿಂದ ಶ್ರಮಪಟ್ಟು ಬೆಳೆದಿದ್ದೇನೆ. ಈ ವರ್ಷ ಉತ್ತಮ ಆದಾಯ ನಿರೀಕ್ಷಿಸಿದ್ದೆ. ಆದರೆ ಅಕಾಲಿಕ ಮಳೆಯಿಂದ ಎಲ್ಲವೂ ಹಾಳಾಗಿದೆ. ಸಾಲ ಮಾಡಿ ಬೆಳೆದಿದ್ದೇನೆ, ಈಗ ಹೇಗೆ ಎದುರಿಸಬೇಕು ಗೊತ್ತಾಗುತ್ತಿಲ್ಲ” ಎಂದು ತನ್ನ ನೋವನ್ನು ಹೊರಹಾಕಿದರು.
ಮಾಗಡಿ ಗ್ರಾಮದಲ್ಲಿ ಬೆಳೆದ ಕಲ್ಲಂಗಡಿ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇತ್ತು. ಆದರೆ ಮಳೆಯಿಂದ ಹಣ್ಣುಗಳ ಗುಣಮಟ್ಟ ಕುಸಿದಿರುವುದರಿಂದ, ಖರೀದಿದಾರರು ಮುಂದೆ ಬರದ ಸ್ಥಿತಿ ನಿರ್ಮಾಣವಾಗಿದೆ. ಕೆಜಿಗೆ 3-4 ರೂಪಾಯಿಗೂ ಮಾರಾಟವಾಗದ ಸ್ಥಿತಿಯಲ್ಲಿ, ಜಮೀನಿನಲ್ಲೇ ಹಣ್ಣುಗಳು ಕೊಳೆಯುತ್ತಿವೆ. ಇದರಿಂದ ರೈತರಿಗೆ ಡಬಲ್ ನಷ್ಟ ಎದುರಾಗಿದೆ.
ಸ್ಥಳೀಯ ರೈತ ಚನ್ನಪ್ಪ ಮಾತನಾಡಿ, “ಮಳೆ ಬಾರದಿದ್ದರೆ ಉತ್ತಮ ಆದಾಯ ಸಿಗುತ್ತಿತ್ತು. ಈಗ ಕಷ್ಟಪಟ್ಟು ಬೆಳೆದ ಬೆಳೆ ಮಣ್ಣು ಪಾಲಾಗಿದೆ. ಸರ್ಕಾರ ತಕ್ಷಣ ಸ್ಪಂದಿಸಿ ಪರಿಹಾರ ನೀಡಬೇಕು. ಕಂದಾಯ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ನಷ್ಟ ಅಂದಾಜು ಮಾಡಬೇಕು” ಎಂದು ಆಗ್ರಹಿಸಿದರು.
ಒಟ್ಟಾರೆ, ಅಕಾಲಿಕ ಮಳೆಯ ಅಬ್ಬರಕ್ಕೆ ಅನ್ನದಾತನ ಶ್ರಮ ನೀರಿನಲ್ಲೇ ಸೇರಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು, ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ತಕ್ಷಣ ನೆರವು ನೀಡಬೇಕೆಂಬ ಒತ್ತಾಯ ಜೋರಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP