
ಬೆಂಗಳೂರು, 27 ಮಾರ್ಚ್ (ಹಿ.ಸ.):
ಆ್ಯಂಕರ್:ಹಿಂದುಗಳ ಪ್ರಮುಖ ಹಬ್ಬವಾದ ರಾಮನವಮಿಯನ್ನು ಇಂದು ದೇಶದಾದ್ಯಂತ ಭಕ್ತಿಭಾವ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮರ್ಯಾದಾ ಪುರುಷೋತ್ತಮರಾದ ಶ್ರೀರಾಮ ಅವರ ಜನ್ಮದಿನದ ಅಂಗವಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳು, ಹೋಮ-ಹವನಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ಆಚರಿಸಲ್ಪಡುವ ಈ ಹಬ್ಬದ ಅಂಗವಾಗಿ ಭಕ್ತರು ಮುಂಜಾನೆಲೇ ದೇವಾಲಯಗಳಿಗೆ ತೆರಳಿ ದರ್ಶನ ಪಡೆದರು. ಅನೇಕ ಸ್ಥಳಗಳಲ್ಲಿ ರಾಮಾಯಣ ಪಾರಾಯಣ, ಭಜನೆ ಮತ್ತು ಶೋಭಾಯಾತ್ರೆಗಳು ನಡೆಯಿತು. ರಾಮ, ಸೀತಾ, ಲಕ್ಷ್ಮಣ ಮತ್ತು ಹನುಮಂತನ ಮೂರ್ತಿಗಳನ್ನು ಅಲಂಕರಿಸಿ ವಿಶೇಷ ಆರಾಧನೆ ಸಲ್ಲಿಸಲಾಯಿತು.
ಉತ್ತರ ಪ್ರದೇಶದ ಅಯೋಧ್ಯೆ ನಗರದಲ್ಲಿ ರಾಮನವಮಿ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆದಿದ್ದು, ಸಾವಿರಾರು ಭಕ್ತರು ಭಾಗವಹಿಸಿ ದರ್ಶನ ಪಡೆದರು. ಭದ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು, ಶಾಂತಿಯುತವಾಗಿ ಹಬ್ಬ ಆಚರಣೆ ನಡೆಯಿತು.
ಇದೇ ವೇಳೆ ವಿವಿಧ ಸಂಘಟನೆಗಳು ಅನ್ನದಾನ, ಧಾರ್ಮಿಕ ಉಪನ್ಯಾಸಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿವೆ. ಹಲವರು ಉಪವಾಸ ಆಚರಿಸಿ ಧಾರ್ಮಿಕ ವಿಧಿವಿಧಾನಗಳಲ್ಲಿ ತೊಡಗಿಕೊಂಡಿದ್ದಾರೆ.
ರಾಮನವಮಿ ಹಬ್ಬವು ಸತ್ಯ, ಧರ್ಮ ಮತ್ತು ನೈತಿಕ ಮೌಲ್ಯಗಳ ಪ್ರತೀಕವಾಗಿದ್ದು, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುವ ಹಬ್ಬವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa